ತುಮಕೂರು : ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ವೈಎನ್ ಹೊಸಕೋಟೆ ಹೋಬಳಿ ಮೂಲಕ ಆಂಧ್ರದ ಜನರು ಜಿಲ್ಲೆಗೆ ಆಗಮಿಸುತ್ತಿದ್ದು , ಜನರಲ್ಲಿ ಆತಂಕ ಸೃಷ್ಟಿಸಿದೆ.
ಕೊರೊನಾ ವೈರಸ್ ತಡೆಗಟ್ಟುಲು ಜಿಲ್ಲಾಡಳಿತ ಜಿಲ್ಲೆಯ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಗಡಿಭಾಗದ ಕಚ್ಚಾ ರಸ್ತೆಗಳಲ್ಲಿ ಕಂದಕಗಳನ್ನು ತೆಗೆದು ಬೇಲಿ ಹಾಕಿ ಸಂಚಾರ ಬಂದ್ ಮಾಡಿ ಗಡಿ ಭಾಗದ ಹಳ್ಳಿಗಳಲ್ಲಿ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ಆಂಧ್ರದ ಜನತೆ ಇವೆಲ್ಲವನ್ನು ತಪ್ಪಿಸಿ ದ್ವಿಚಕ್ರ ವಾಹನಗಳಲ್ಲಿ ಕಳ್ಳ ದಾರಿಗಳ ಮೂಲಕ ಹೋಬಳಿ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ದೊಡ್ಡಹಳ್ಳಿ ಮತ್ತು ಸಿದ್ದಾಪುರದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಆಂಧ್ರಪ್ರದೇಶದವರು ರಾಜ್ಯಕ್ಕೆ ಬಾರದಂತೆ ತಡೆಯಲಾಗುತ್ತಿದೆ. ಆದರೆ ಜನರು ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ವೈಎನ್ ಹೊಸಕೋಟೆಗೆ ಪ್ರತಿನಿತ್ಯ ಆಗಮಿಸುತ್ತಿದ್ದಾರೆ. ಹೋಬಳಿ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ಕಲ್ಯಾಣದುರ್ಗದಲ್ಲಿ ಈಗಾಗಲೇ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲಾಗಿದ್ದು, ಸುತ್ತಮುತ್ತಲಿನ ಆಂಧ್ರಪ್ರದೇಶದ ಹಳ್ಳಿಗಳ ಜನರು ನಿತ್ಯ ವಿವಿಧ ಉದ್ದೇಶಗಳಿಗಾಗಿ ಆಗಮಿಸುತ್ತಿದ್ದಾರೆ.
ಭೀಮನಕುಂಟೆ, ದಳವಾಯಿಹಳ್ಳಿ, ಗೌಡತಿಮ್ಮನಹಳ್ಳಿ, ಜಾಲೋಡು, ಮಾರಮ್ಮನಹಳ್ಳಿ ಮತ್ತು ಕುಣಿಹಳ್ಳಿಗಳ ಮೂಲಕ ಆಂಧ್ರಪ್ರದೇಶ ದ ಜನರು ಬಂದು ಹೋಗುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನರ ಓಡಾಟವನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.