ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ಜಲಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.
ವಿಕಾಸಸೌಧದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ನಾಲ್ಕು ನೀರಾವರಿ ನಿಗಮಗಳಿಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನೆ, ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದ ಮಾಹಿತಿಗಳ ಚರ್ಚೆ, ಕಾಡಾ ಯೋಜನೆಗಳ ಪ್ರಗತಿ, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಗುರುವಾರ ಮತ್ತು ಶುಕ್ರವಾರ ಎತ್ತಿನಹೊಳೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಆಯಾ ಪ್ರದೇಶಗಳ ಜನಪ್ರತಿನಿಧಿಗಳೊಂದಿಗೂ ಮಹತ್ವದ ಸಭೆ ನಡೆಯಲಿದೆ.
ಸರ್ಕಾರದ ಕೋವಿಡ್ ನಿರ್ವಹಣೆಯ ಮಾರ್ಗಸೂಚಿಯಂತೆ ಸಭೆ ನಡೆಯಲಿದ್ದು, ಸಭೆ ಮುಕ್ತಾಯದ ಬಳಿಕ ಜಲಸಂಪನ್ಮೂಲ ಸಚಿವರು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.