ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾವೇರಿ ಚಳವಳಿಯ ಹಿರಿಯ ರೈತ ಹೋರಾಟಗಾರ ಜಿ.ಮಾದೇಗೌಡರ ಆರೋಗ್ಯವನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿಚಾರಿಸಿದ್ದಾರೆ.
ನಗರದ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಸುಮಲತಾ ಅಂಬರೀಶ್, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡರ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಆರೋಗ್ಯ ಸ್ಥಿತಿ, ಚಿಕಿತ್ಸೆಗೆ ಸ್ಪಂದನೆ ಕುರಿತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಮಾದೇಗೌಡರ ಪುತ್ರನ ಜೊತೆಯಲ್ಲಿಯೂ ಕೆಲಕಾಲ ಚರ್ಚಿಸಿದರು.
![ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾದೇಗೌಡರ ಆರೋಗ್ಯ ವಿಚಾರಿಸಿದ ಸುಮಲತಾ ಅಂಬರೀಶ್](https://etvbharatimages.akamaized.net/etvbharat/prod-images/03:28:04:1625479084_kn-bng-03-sumalatha-madegowda-meet-script-7208080_05072021152139_0507f_1625478699_682.jpg)
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ 94 ವರ್ಷ ವಯಸ್ಸಿನ ಮಾದೇಗೌಡರಿಗೆ 15 ದಿನದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಎಸ್.ಎಂ ಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಆರು ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿರುವ ಮಾದೇಗೌಡರು, ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದು, ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದಾರೆ.