ಶಿವಮೊಗ್ಗ:ಇದೇ ತಿಂಗಳ 23ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಮಧು ಬಂಗಾರಪ್ಪನವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಜನತೆಗೆ ಮನವಿ ಮಾಡಿಕೊಳ್ಳುವುದೇನೆಂದರೆ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ನಂಬಬೇಡಿ. ಸುಳ್ಳು ಹೇಳುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಮಾಡದೆ ಇದ್ದಂತಹ ಅನೇಕ ನೀರಾವರಿ ಯೋಜನೆಗಳಿಗೆ ಈ ಬಾರಿಯ ಬಜೆಟ್ನಲ್ಲಿ ನಮ್ಮ ಮೈತ್ರಿ ಪಕ್ಷದ ವತಿಯಿಂದ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ ಯಡಿಯೂರಪ್ಪನವರು ಈ ಯೋಜನೆಗಳು ನಾನೇ ಹಾಕಿಸಿದ್ದು, ನನ್ನಿಂದಲೇ ಯೋಜನೆಗಳ ಅನುಷ್ಠಾನ ಆಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
1991ರಲ್ಲಿ ಬಂಗಾರಪ್ಪನವರು ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನೀರಾವರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಹಾಗಾಗಿ ಅದರಂತೆ ಈ ವರ್ಷವೂ ಸಹ ನೀರಾವರಿ ಯೋಜನೆಗೆ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದರು. ಹಾಗೆ ರೈತರ ಸಾಲ ಮನ್ನದ ಕುರಿತು ವಿರೋಧ ಪಕ್ಷಗಳು ಸುಳ್ಳು ಸುದ್ದಿಯನ್ನು ಹಂಬಿಸುತ್ತಿವೆ. ರೈತರ ಸಹಕಾರಿ ಬ್ಯಾಂಕ್ಗಳ ಸಾಲ ಮನ್ನಾ ಆಗಿದೆ. ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ರೈತರಿಗೆ ಭರವಸೆ ನೀಡಿದರು.
ಸಿಎಂ ಕುಮಾರಸ್ವಾಮಿ ಸ್ವಲ್ಪ ದಿನದಲ್ಲಿ ನೆಗೆದು ಬೀಳುತ್ತಾರೆ ಎಂಬ ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ನೀಡಿದ್ದಕ್ಕೆ ನಾನು ನೆಗೆದು ಬೀಳಬೇಕೆ. ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಕ್ಕೆ ನಾನು ನೆಗೆದು ಬೀಳಬೇಕೆ ಎಂದು ಪ್ರಶ್ನಿಸಿದರು. ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ ಎಂದರು.