ಶಿವಮೊಗ್ಗ: ಊರಿನಲ್ಲಿ ಸ್ಮಶಾನವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಆವರಣದಲ್ಲೇ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಘಟನೆ ಶಿವಮೊಗ್ಗ ತಾಲೂಕಿನ ಸಂತೆ ಕಡೂರು ಗ್ರಾಮದಲ್ಲಿ ನಡೆದಿದೆ. ಈ ಹಿಂದೆ ಸಂತೆ ಕಡೂರು ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿದ್ದ ಮೂರು ಎಕರೆ ಜಾಗದಲ್ಲಿ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಕಳೆದ ವಾರ ಉಳಿದ ಜಾಗವನ್ನು ಸರ್ವೇ ಮಾಡಲು ಅಧಿಕಾರಿಗಳು ಹೋದಾಗ ಅಲ್ಲಿದ್ದವರು ಪ್ರತಿಭಟಿಸಿ ಅವರನ್ನು ವಾಪಸ್ ಕಳುಹಿಸಿದ್ದರು. ಇಂದು ಸಂತೆ ಕಡೂರು ಎ ಕೆ ಕಾಲೋನಿಯಲ್ಲಿ ರಂಗಮ್ಮ ಎನ್ನುವರು ಮೃತ ಪಟ್ಟಿದ್ದರು. ಅವರ ಶವಸಂಸ್ಕಾರವನ್ನು ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಮಾಡಲು ಕುಟುಂಬದವರು ಹಾಗೂ ಸಂಬಂಧಿಕರು ಮುಂದಾಗಿದ್ದಾರೆ.
ಆದರೆ ಅಲ್ಲಿ ಮನೆ ಕಟ್ಟಿಕೊಂಡಿರುವವರು ಶವ ಸಂಸ್ಕಾರಕ್ಕೆ ಅವಕಾಶ ನೀಡಿಲ್ಲ. ಇದರಿಂದ ಕೋಪಗೊಂಡ ಗ್ರಾಮಸ್ಥರು ಗ್ರಾಮಪಂಚಾಯಿತಿ ಆವರಣದಲ್ಲಿ ಗುಂಡಿ ತೆಗೆದು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮದುವೆ ಮಾಡಿದ ಸಂಬಂಧಿಕರ ಮೇಲೆ ಬಿತ್ತು ಕೇಸು