ಶಿವಮೊಗ್ಗ: ಎರಡು ದಿನಗಳ ಹಿಂದೆ ಸೊರಬ ತಾಲೂಕು ಆನವಟ್ಟಿ ಬಳಿ ನಡೆದ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ದೂರುದಾರನೇ ಪ್ರಮುಖ ಆರೋಪಿ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಸಾಗರದ ಅಡಿಕೆ ವ್ಯಾಪಾರಿಯೊಬ್ಬರು ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಗರಕ್ಕೆ ವಾಪಸ್ ಆಗುವ ಸಂದರ್ಭ ಸೊರಬದ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಕೋಡು ಕ್ರಾಸ್ ಬಳಿ ಕಾರನ್ನು ಅಡ್ಡಗಟ್ಟಿದ ಆರೋಪಿಗಳು ಅಡಿಕೆ ವ್ಯಾಪಾರಿ ಹಾಗೂ ಚಾಲಕನನ್ನು ಬೆದರಿಸಿ ಸುಮಾರು 15 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಕುರಿತು ಅಡಿಕೆ ವ್ಯಾಪಾರಿಯ ಕಾರು ಚಾಲಕ ನಫೀಸ್ ಅಲಂ ಆನವಟ್ಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಿಎಸ್ಐ ಪ್ರವೀಣ್ ಅವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಂಡರು.
ಇದನ್ನು ಓದಿ: ವಿದ್ಯುತ್ ತಂತಿ ಸ್ಪರ್ಶ... ಕಂಟೈನರ್ನಲ್ಲಿದ್ದ ಕ್ಲೀನರ್ಗೆ ಬೆಂಕಿ ಹೊತ್ತಿಕೊಂಡು ಗಂಭೀರ ಗಾಯ
ತನಿಖೆ ಪ್ರಾರಂಭಿಸಿದ ಪೊಲೀಸರು ಸಾಗರದ ನಿವಾಸಿಗಳಾದ ಕನ್ನಪ್ಪ(43), ವಿಶ್ವನಾಥ್(32) ರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಕಾರು ಚಾಲಕ ನಫೀಸ್ ಅಲಂ ಅವರೇ ಆ ಇಬ್ಬರು ಆರೋಪಿಗಳಿಗೆ ಹಣದ ಮಾಹಿತಿ ನೀಡಿ ದರೋಡೆ ಮಾಡಿಸಿದ್ದು ಎಂಬುದನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ದರೋಡೆಗೆ ಬಳಸಿದ್ದ ಕಾರು ಹಾಗೂ 15 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ದರೋಡೆ ನಡೆದ 48 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.