ಶಿವಮೊಗ್ಗ: ''ಟೀಕೆ ಮಾಡುವವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನವೇ ಉತ್ತರವಾಗಿದೆ'' ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಜನವರಿ 12ರಂದು ನಡೆಯುವ ಯುವ ನಿಧಿ ಕಾರ್ಯಕ್ರಮದ ಕುರಿತು ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಒಂದು ಗ್ರಾಮ ಪಂಚಾಯಿತಿಗೆ ಗ್ಯಾರಂಟಿ ಯೋಜನೆಗಳಿಂದ ಕನಿಷ್ಠ 75 ಲಕ್ಷ ರೂ ಹೋಗುತ್ತಿದೆ. ಒಂದು ಕುಟುಂಬಕ್ಕೆ ಕನಿಷ್ಟ 5 ಸಾವಿರ ರೂ. ನಮ್ಮ ಸರ್ಕಾರದ ಗ್ಯಾರಂಟಿ ನೀಡುತ್ತಿದೆ. ಖಜಾನೆ ಖಾಲಿ ಆಗಿದೆ ಎಂದು ಹೇಳುವವರಿಗೆ ನಮ್ಮ ಉತ್ತರವಾಗಿದೆ. ಗ್ಯಾರಂಟಿ ಜಾರಿಯಾದ ನಂತರ ಮುಂದಿನ ವರ್ಷದಲ್ಲಿ ನಮ್ಮ ಸರ್ಕಾರ ಅಭಿವೃದ್ದಿಯ ಕಡೆ ಗಮನ ಹರಿಸಲಿದೆ'' ಎಂದು ತಿಳಿಸಿದರು.
''ನಾಳೆ ದೆಹಲಿಗೆ ನಮ್ಮನ್ನು ಕರೆದಿದ್ದರು. ಆದರೆ, ಕಾರ್ಯಕ್ರಮ ಇರುವುದರಿಂದ ನಾವು ಹೋಗುತ್ತಿಲ್ಲ. ಇದು ಯುವಕರ ಭವಿಷ್ಯದ ಸರ್ಕಾರ. ಇದರಿಂದ ಯುವನಿಧಿ ಜಾರಿ ಮಾಡುತ್ತಿದ್ದೇವೆ. ನಾಡಿದ್ದು ಡಿಬಿಟಿಯಡಿ ಹಣ ನೊಂದಣಿ ಮಾಡಿಕೊಂಡವರಿಗೆ ನೇರವಾಗಿ ಹಣ ಹೋಗುತ್ತಿದೆ. 1.50 ಲಕ್ಷ ಯುವಕರು ಆಗಮಿಸುತ್ತಿದ್ದಾರೆ. ಯುವನಿಧಿ ಕಾರ್ಯಕ್ರಮ ಶಿವಮೊಗ್ಗದಲ್ಲಿ ಜರುಗುತ್ತಿರುವುದು ನನಗೆ ಬಹಳ ಹೆಮ್ಮೆ ಹಾಗೂ ಸಂತೋಷವಾಗುತ್ತಿದೆ'' ಎಂದರು.
''ಬಿಜೆಪಿಯವರು ಯಾವ ಜನಪರ ಕಾರ್ಯಕ್ರಮ ಮಾಡಲಿಲ್ಲ'' ಎಂದು ಅವರು, ''ನಾವೆಲ್ಲ ರಾಮಭಕ್ತರು, ಅವರು ಮಾತ್ರ ಅಲ್ಲ, ಬಿಜೆಪಿಯವರು ಭಾವನಾತ್ಮಕವಾಗಿರದೇ, ಅಭಿವೃದ್ಧಿಯನ್ನು ಮಾಡಿ ತೋರಿಸಬೇಕಿದೆ. ನಮ್ಮ ಸರ್ಕಾರ ಪ್ರತಿ ಮನೆಗೂ ಸಹ ಯೋಜನೆ ತಲುಪಿಸಿದೆ'' ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ್ ಅವರು, ''ಯುವ ನಿಧಿ ಯೋಜನೆಯಡಿ ಈವರೆಗೆ 61 ಸಾವಿರ ಜನ ನೋಂದಣಿ ಆಗಿದ್ದಾರೆ. ಜ.12ರಂದು ಕಾರ್ಯಕ್ರಮದಡಿ ಆನ್ಲೈನ್ನಲ್ಲಿ ನೋಂದಣಿ ಮಾಡಲಾಗುತ್ತಿದೆ. 2022-23 ರಲ್ಲಿ ಡಿಪ್ಲೋಮಾ ಪಾಸ್ ಆದವರು 5.29 ಲಕ್ಷ ಹಾಗೂ ಮುಂದಿನ ವರ್ಷ 10 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಗುರಿ ಇದೆ'' ಎಂದು ಅವರು ಮಾಹಿತಿ ನೀಡಿದರು.
ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ: ''ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಗಣರಾಜ್ಯೋತ್ಸವದಲ್ಲಿ ನಮ್ಮ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುತ್ತಿಲ್ಲ'' ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.
''ಕೇಂದ್ರವು ಕೇವಲ ಗಣ ರಾಜ್ಯೋತ್ಸವದ ವಿಚಾರದಲ್ಲಿ ಅಷ್ಟೆ ಅಲ್ಲ, ಬರದ ಪರಿಹಾರ ಹಣ ಬಿಡುಗಡೆಯಲ್ಲಿ ಮೀನಮೇಷ ಎಣಿಸುತ್ತಿದೆ. ಬರ ಘೋಷಣೆ ಮಾಡಿದರೂ ಸಹ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ನಮ್ಮ ಸಿಎಂ ಹಾಗೂ ಮಂತ್ರಿಗಳು ದೆಹಲಿಗೆ ಹೋಗಿ ಬಂದ್ರು ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಜನ ಕಾಂಗ್ರೆಸ್ಗೆ ಮತ ಹಾಕಿದ್ದಕ್ಕೆ ರಾಜ್ಯಕ್ಕೆ ಯಾವುದೇ ಯೋಜನೆ ತಾರದೇ ರಾಜ್ಯದ ಜನತೆಗೆ ಅಪಮಾನ ಮಾಡುತ್ತಿದ್ದಾರೆ'' ಎಂದು ಗರಂ ಆದರು.
ವಿವೇಕಾನಂದ ಜಯಂತಿಯಂದು ಯುವನಿಧಿಗೆ ಚಾಲನೆ: ಸ್ವಾಮಿ ವಿವೇಕನಂದರು ಯುವಕರ ಐಕಾನ್ ಆಗಿರುವ ಕಾರಣ ನಾಡಿದ್ದು ಚಾಲನೆ ನೀಡಲಾಗುತ್ತಿದೆ. ಯುವಕರಿಗೆ ಕೇವಲ ಯುವನಿಧಿ ನೀಡುವ ಜೊತೆಗೆ, ಪ್ರತ್ಯೇಕ ತರಬೇತಿ ನೀಡುವ ಗುರಿಯಾಗಿದೆ. ಯುವಕರಿಗೆ ಉದ್ಯೋಗ ನೀಡುವುದೇ ನಮ್ಮ ಸರ್ಕಾರದ ಯೋಜನೆಯಾಗಿದೆ ಎಂದು ತಿಳಿಸಿದರು.
ಯುವ ಜ್ಯೋತಿ ಜಾಥಾ: ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎನ್ಎಸ್ಯುಐ ಘಟಕದ ವತಿಯಿಂದ ಯುವ ಜ್ಯೋತಿ ಜಾಥಾ ನಡೆಯಿತು.
ಯುವ ಜ್ಯೋತಿ ಜಾಥಾವು ಶಿವಮೊಗ್ಗ ನಗರದ ಜೈಲ್ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ ( ಗೋಪಿ ವೃತ್ತ ) ವೃತ್ತದವರೆಗೂ ನಡೆಯಿತು. ನೂರಾರು ಎನ್ಎಸ್ಯುಐ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಮಧು ಬಂಗಾರಪ್ಪ ಜ್ಯೋತಿ ಹಿಡಿದು ನಡೆದಿದ್ದು ವಿಶೇಷವಾಗಿತ್ತು.
ಜಾಥಾದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಎಚ್.ಸಿ. ಯೋಗೀಶ್, ಆರ್. ಪ್ರಸನ್ನಕುಮಾರ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯ್, ಮಧುಸೂದನ್, ಕೆ.ಚೇತನ್, ಚರಣ್, ಹರ್ಷಿತ್, ರವಿ ಕಾಟಿಕೇರೆ, ಕಲೀಂ ಪಾಷಾ, ದೇವೆಂದ್ರಪ್ಪ, ಸಂತೆಕುಡೂರು ವಿಜಯ್, ಧೀರಜ್, ರಂಗೇ ಗೌಡರು ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು: ಬಿಜೆಪಿ ನಾಯಕರಿಂದ ವಾಗ್ದಾಳಿ