ಬೆಂಗಳೂರು: ಕಳೆದ ಹಲವು ದಿನಗಳಿಂದ ಉಂಟಾದ ಪ್ರವಾಹದಿಂದ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ವರದಿಯನ್ನು ಪ್ರತಿನಿತ್ಯ ಪರಿಹಾರ ತಂತ್ರಾಂಶದಲ್ಲಿ ನಮೂದಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ನವೆಂಬರ್ 21ರವರೆಗೆ ಪ್ರವಾಹದಿಂದ ಆಗಿರುವ ಬೆಳೆಹಾನಿ ವಿವರವನ್ನು ಜಂಟಿ ಸಮೀಕ್ಷೆ ನಡೆಸಿ ಪ್ರತಿನಿತ್ಯ ಪರಿಹಾರ ತಂತ್ರಾಂಶದಲ್ಲಿ ನಮೂದಿಸಬೇಕು. ಅದರ ಆಧಾರದ ಮೇಲೆ ಇನ್‍ಪುಟ್ ಸಬ್ಸಿಡಿಯನ್ನು ಫಲಾನುಭವಿಗಳಿಗೆ ಪಾವತಿಸಲಾಗುವುದು ಎಂದು ಕಂದಾಯ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ನವೆಂಬರ್ 30ರವರೆಗೆ ಉಂಟಾಗುವ ಬೆಳೆ ಹಾನಿಯ ವಿವರಗಳನ್ನು ಡಿಸೆಂಬರ್ 7ರೊಳಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಪ್ರತಿನಿತ್ಯ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಬೇಕು.
ಇನ್ನು ಮುಂದೆ ಅತಿವೃಷ್ಟಿಯಂತಹ ಪ್ರಕೃತಿ ವಿಕೋಪ ಉಂಟಾದಾಗ ಸರ್ಕಾರದಿಂದ ಪ್ರತ್ಯೇಕವಾಗಿ ಘೋಷಿಸುವುದಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಪರಿಸ್ಥಿತಿಯನ್ನು ಅವಲೋಕಿಸಿ ಎಸ್ಡಿಆರ್ಎಫ್ ಅಥವಾ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಹಾನಿಯ ವಿವರವನ್ನು ನಮೂದಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂಗಾರು ಹಂಗಾಮಿನ ಆಗಸ್ಟ್ ಮತ್ತು ಜುಲೈ ತಿಂಗಳಿನಲ್ಲಿ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದ ಆಗಿರುವ ಹಾನಿಗೆ ನೀಡುವ ಪರಿಹಾರದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಪ್ರವಾಹದಿಂದ ನೀರು ನುಗ್ಗಿ ಹಾನಿಗೀಡಾದ ಗೃಹೋಪಯೋಗಿ ವಸ್ತುಗಳಿಗೆ 10,000 ರೂ. ಶೇ.75ಕ್ಕಿಂತ ಹೆಚ್ಚು ಪೂರ್ಣ ಮನೆ ಹಾನಿಯಾಗಿದ್ದರೆ ಎ ವರ್ಗದ ಮನೆಗೆ 5 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿದೆ.
ಶೇ.25 ರಿಂದ 75 ರವರೆಗೆ ತೀವ್ರವಾದ ಬಿ ವರ್ಗದ ಮನೆ ಹಾನಿಯಾಗಿದ್ದರೆ 3 ಲಕ್ಷ ರೂ. ಹಾಗೂ ಶೇ.15 ರಿಂದ ಭಾಗಶಃ ಹಾನಿಯಾದ ಸಿ ವರ್ಗದ ಮನೆಗೆ 50 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿದೆ. ಇದರಲ್ಲಿ ಮಾರ್ಗಸೂಚಿ ದರದ ಹಣದ ಜೊತೆಗೆ ರಾಜ್ಯ ಸರ್ಕಾರ ನೀಡುವ ಹೆಚ್ಚುವರಿ ಪರಿಹಾರವು ಸೇರಿದೆ.
ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಖಾತೆಯಲ್ಲಿರುವ ಅನುದಾನವನ್ನು ಬಳಸಿ ಪರಿಹಾರವನ್ನು ಪಾವತಿಸಬೇಕು. ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ ಮರುಪಾವತಿ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರಿಹಾರ ಪಾವತಿಯಾದ ವಿವರವನ್ನು ಆರ್ಜಿಆರ್ಹೆಚ್ಸಿಎಲ್ ತಂತ್ರಾಂಶದಲ್ಲಿ ನಮೂದಿಸಬೇಕು. ಮೊದಲ ಕಂತಿನಲ್ಲಿ ಎ ಮತ್ತು ಬಿ ವರ್ಗದ ಮಳೆ ಹಾನಿ ಪ್ರಕರಣಗಳಲ್ಲಿ ಮಾರ್ಗಸೂಚಿಯಂತೆ 95,100 ರೂ. ಪರಿಹಾರವನ್ನು ಪಾವತಿಸಬೇಕು. ಅದೇ ರೀತಿ ಸಿ ವರ್ಗದ ಮನೆಗಳಿಗೆ 50 ಸಾವಿರ ರೂ. ಪಾವತಿಸುವಂತೆ ಆದೇಶದಲ್ಲಿ ಕಂದಾಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ.. ರಾಜ್ಯಪಾಲ ಗೆಹ್ಲೋಟ್