ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಭಾಗ್ಯ ಸದ್ಯಕ್ಕಿಲ್ಲ ಎಂದು ದೇವಾಲಯದ ಟ್ರಸ್ಟ್ ಹೇಳಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಎಲ್ಲಾ ದೇವಾಲಯಗಳು ಮುಚ್ಚಿದ್ದವು. ಆದರೆ ಈಗ ಸರ್ಕಾರ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದ್ದರೂ ಸಹ ಸಾಗರ ತಾಲೂಕಿನ ಸಿಗಂದೂರಿನ ಚೌಡೇಶ್ಚರಿ ಟ್ರಸ್ಟ್ನವರು ದೇವಾಲಯ ತೆರೆಯದಿರಲು ನಿರ್ಧರಿಸಿದ್ದಾರೆ. ಸಿಗಂದೂರು ದೇವಾಲಯವು ಸಾಗರದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿದೆ. ದೇವಾಲಯಕ್ಕೆ ತೆರಳಲು ಲಾಂಚ್ ಮಾರ್ಗ ಮಾತ್ರ ಇರುವುದು. ಇದು ಸಾಗರದಿಂದ ಸ್ವಲ್ಪ ಹತ್ತಿರವಾಗುತ್ತದೆ. ಹೊಸನಗರಕ್ಕೆ ಹಾಗೂ ಕಾರ್ಗಲ್ ಮೂಲಕ ಸಾಗರಕ್ಕೆ ತೆರಳಲು ಸಾಕಷ್ಟು ದೂರ ಪ್ರಯಾಣ ಮಾಡಬೇಕಿದ್ದು, ಇದು ಕಷ್ಟವಾಗುತ್ತದೆ.
ಭಕ್ತರು ದೇವಾಲಯಕ್ಕೆ ಬಂದಾಗ ಒಬ್ಬರಿಂದೊಬ್ಬರಿಗೆ ಅಂತರ ಕಾಯ್ದು ಕೊಳ್ಳುವುದು ಕಷ್ಟಗುತ್ತದೆ. ದೇವಾಲಯ ಹಾಗೂ ಸರ್ಕಾರದ್ದು ಸೇರಿ ಎರಡು ಆ್ಯಂಬ್ಯುಲೆನ್ಸ್ ಮಾತ್ರ ಇವೆ. ತುರ್ತು ಸೇವೆಗೆ ಸಾಗರಕ್ಕೆ ಹೋಗಬೇಕಾಗಿರುವುದರಿಂದ ಸದ್ಯಕ್ಕೆ ದೇವಾಲಯ ತೆರೆಯದಿರಲು ದೇವಾಲಯದ ಟ್ರಸ್ಟ್ ನಿರ್ಧರಿಸಿದೆ.
ಈ ಕುರಿತು ಈಟಿವಿ ಭಾರತಕ್ಕೆ ಟ್ರಸ್ಟ್ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಸ್ವಲ್ಪ ದಿನ ಕಾದು ನೋಡುತ್ತೇವೆ. ಪಕ್ಕದ ಜಿಲ್ಲೆ ಉಡುಪಿಯಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೆಲ ದೇವಾಲಯಗಳ ಆಡಳಿತ ಮಂಡಳಿಗಳು ಅನುಸರಿಸುವ ಕ್ರಮವನ್ನು ನೋಡಿ ಚೌಡೇಶ್ವರಿ ದೇವಾಲಯ ತೆರೆಯುವ ಕುರಿತು ತೀರ್ಮಾನಿಸಲಾಗುವುದು. ಸೊರಬದ ಚಂದ್ರಗುತ್ತಿ ಹಾಗೂ ಸಾಗರದ ಶ್ರೀಧರಾಶ್ರಮಗಳು ನಾಳೆಯಿಂದ ತೆರೆಯಲಿವೆ.