ಶಿವಮೊಗ್ಗ: ಸರ್ವೋಚ್ಚ ನ್ಯಾಯಾಲಯದ ಆದೇಶದನುಸಾರ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಅನುಮೋದಿಸಿ, ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಬೇಕು. ಹಾಗೂ ಸ್ಥಳೀಯ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ಮಾದಿಗ ದಂಡೋರ ಸಮಿತಿ ವತಿಯಿಂದ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಶಿವಮೊಗ್ಗ ನಗರದ ಹೃದಯಭಾಗದಲ್ಲಿ ಮಾದಿಗ ಸಮಾಜದ ಸಮುದಾಯ ಭವನಕ್ಕೆ ಎರಡು ಎಕರೆ ಜಾಗ ಕೂಡಲೇ ಗುರುತಿಸಿ ಮಂಜೂರು ಮಾಡಬೇಕು. ಹಾಗೂ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನೇಮಕಾತಿಯ ಹೊರಗುತ್ತಿಗೆಯನ್ನು ಕೂಡಲೇ ರದ್ದುಪಡಿಸಿ, ಎಸ್ಸಿ, ಎಸ್ಟಿ ನೇಮಕಾತಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಆದಿಕರ್ನಾಟಕ ಎಸ್ಸಿ ಎಂದು ಜಾತಿ ದೃಢೀಕರಣ ನೀಡುತ್ತಿದ್ದು, ಮಾದಿಗ ಸಮಾಜದವರಿಗೆ ಬದಲಾಗಿ ಮಾದಿಗ ಎಸ್ಸಿ ಎಂದು ಜಾತಿ ದೃಢೀಕರಣ ಪತ್ರ ನೀಡಲು ಜಿಲ್ಲಾಧಿಕಾರಿಗಳು ಕೂಡಲೇ ಎಲ್ಲಾ ತಹಶೀಲ್ದಾರ್ಗಳಿಗೆ ಆದೇಶಿಸಬೇಕು. ಕುವೆಂಪು ವಿವಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿ ದೊಡ್ಡ ಹುದ್ದೆಯಲ್ಲಿರುವ ಸೀತಾರಾಮ್ ಮತ್ತು ಷಣ್ಮುಖ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.