ಶಿವಮೊಗ್ಗ: ಜಿಲ್ಲೆಯ ಬಾಪೂಜಿ ನಗರದಲ್ಲಿ ಜಿಲ್ಲಾ ಗಂಗಾಮತ ಸಂಘದ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಸಮುದಾಯ ಭವನಕ್ಕೆ ಶಾಸಕರ ನಿದಿಯಿಂದ 25 ಲಕ್ಷ ರೂ. ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.
ಜಿಲ್ಲಾ ಗಂಗಾಮತ ವಿದ್ಯಾರ್ಥಿನಿಲಯದ 2ನೇ ಅಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗಂಗಾಮತ ಸಮಾಜವು ತೀರಾ ಹಿಂದುಳಿದ ಸಮಾಜ ಎಂಬ ಕೀಳರಿಮೆ ಬೇಡ. ನಾವು ಯಾರಿಗೇನೂ ಕಡಿಮೆ ಇಲ್ಲ ಎಂಬ ಮನೋಭಾವನೆಯನ್ನು ಸಮಾಜದವರು ಬೆಳೆಸಿಕೊಳ್ಳಬೇಕು. ಒಟ್ಟಾಗಿ ಒಗ್ಗಟ್ಟಾಗಿದ್ದಾಗ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ ಎಂದರು.
ಇದನ್ನೂ ಓದಿ: ಪತ್ನಿ ಸಮೇತರಾಗಿ ಬಂದು ಕೊರೊನಾ ಲಸಿಕೆ ಪಡೆದ ಸಚಿವ ಈಶ್ವರಪ್ಪ
ಗಂಗಾಮತ, ಬೆಸ್ತರು ಎಂದು ಕರೆಯುವ ಈ ಸಮಾಜದ ಅಭಿವೃದ್ಧಿಗೆ ಹಿರಿಯರ ಕೊಡುಗೆಯೂ ಇದೆ. ಅದನ್ನು ಗಮನಿಸಿಕೊಂಡು ಸಮಾಜದ ಸಂಘಟನೆಗೆ ಒತ್ತುಕೊಡಿ ಎಂದ ಅವರು ಶಾಸಕರ ನಿಧಿಯಿಂದ 25 ಲಕ್ಷ ರೂ. ಕೂಡಲೇ ಸಹಾಯ ಮಾಡುವುದಾಗಿ ತಿಳಿಸಿದರು. ಸಮುದಾಯ ಪೂರ್ಣ ಆಗುವವರೆಗೂ ಜೊತೆಗಿರುತ್ತೇನೆ. ಮುಂದಿನ ದಿನಗಳಲ್ಲೂ ಕೂಡ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.