ಶಿವಮೊಗ್ಗ: ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಮಾರ್ಚ್.26ರವರೆಗೆ ನಡೆಯಲಿದೆ.
ಗಾಂಧಿ ಬಜಾರ್ನಲ್ಲಿರುವ ದೇಗುಲದಲ್ಲಿ ಬೆಳಗ್ಗೆ ದೇವಿಗೆ ಬಾಸಿಂಗ ಕಟ್ಟುವ ಮೂಲಕ ಜಾತ್ರಾ ಮಹೋತ್ಸವ ಚಾಲನೆಗೊಂಡಿತು. ಬೆಳಗ್ಗೆ 7 ಗಂಟೆಗೆ ದೇವಿಯ ದರ್ಶನ ಪ್ರಾರಂಭಗೊಂಡಿದ್ದು, ಭಕ್ತರು ದೇವಿಯ ದರ್ಶನಕ್ಕೆ ಬೆಳಗ್ಗೆ 5 ಗಂಟೆಗೆಯಿಂದಲೇ ಕಾದು ಕುಳಿತ್ತಿದ್ದರು. ಮೊದಲ ಪೂಜೆ ಪ್ರಾರಂಭವಾದ ಬಳಿಕ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು. ಭಕ್ತರು ನಾಲ್ಕೈದು ಕಿಮೀ ಉದ್ದದ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಹರಕೆ, ಕಾಣಿಕೆ ಸಲ್ಲಿಕೆ:
ದೇವಿಯ ದರ್ಶನಕ್ಕೆ ಬಂದ ಭಕ್ತರು, ದೇವಿಗೆ ಮಡಲಕ್ಕಿ, ಕಾಯಿ, ಸೀರೆ, ರವಿಕೆ ನೀಡಿ ಹರಕೆಯನ್ನು ತೀರಿಸುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಭಂಡಾರ ಹಚ್ಚಿಕೊಂಡು ಪ್ರಸಾದ ಪಡೆದು ಮನೆಗೆ ತೆರಳುತ್ತಿದ್ದಾರೆ. ಇನ್ನು ಸಣ್ಣ ಮಕ್ಕಳನ್ನು ದೇವಿಯ ತೂಡೆ ಮೇಲೆ ಕೂರಿಸಿ ಆರ್ಶಿವಾದಿಸಿ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸೂಕ್ತ ವ್ಯವಸ್ಥೆ:
ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದು, ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್ ಸೇರಿದಂತೆ ನೆರಳಿನ ಎಲ್ಲಾ ವ್ಯವಸ್ಥೆಯನ್ನು ದೇವಾಲಯ ಸಮಿತಿ ಮಾಡಿದೆ. ಇದರ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದೆ.
ಇಂದು ರಾತ್ರಿ ದೇವಿಯನ್ನು ತವರು ಮನೆಯಿಂದ ಗಂಡನ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನಾಳೆ ಬೆಳಗ್ಗೆಯಿಂದ ಶನಿವಾರದ ತನಕ ದೇವಿಯ ದರ್ಶನ ಭಕ್ತರಿಗೆ ಲಭ್ಯವಿರುತ್ತದೆ.
ದೀಪಾಲಂಕಾರ :
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಬಣ್ಣ ಬಣ್ಣಗಳ ಬೆಳಕಿನಲ್ಲಿ ನಗರ ಜಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಜಾತ್ರೆ ನಡೆದಿರಲಿಲ್ಲ. ಸದ್ಯ ರಾಜ್ಯದಲ್ಲಿ ಕೋವಿಡ್ ಕೇಸ್ ಕಡಿಮೆಯಿದ್ದು, ಈ ಬಾರಿ ಅದ್ಧೂರಿಯಾಗಿ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಇದನ್ನೂ ಓದಿ: ಗಾಂಧಿ ಕುಟುಂಬ ಇಲ್ಲ ಅಂದ್ರೆ ಕಾಂಗ್ರೆಸ್ಸೇ ಇಲ್ಲ : ಡಿಕೆಶಿ