ಶಿವಮೊಗ್ಗ: ಜಿಲ್ಲೆಯಲ್ಲಿ ವರ್ಷದ ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಯಲ್ಲಿ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಪ್ರಕರಣ ಪತ್ತೆಯಾಗಿದೆ. ಈಗ ಮಂಗನ ಕಾಯಿಲೆ ಹರಡುವ ಪ್ರಾರಂಭದ ದಿನಗಳಾಗಿದ್ದು, ಜ್ವರ ಬಂದಿರುವ ಕಾಡಂಚಿನ ಗ್ರಾಮಗಳ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರಂತೆ ಈ ಮಹಿಳೆಗೂ ಜ್ವರ ಬಂದಿದ್ದು, ಪರೀಕ್ಷಿಸಿದಾಗ ಆರ್‌ಟಿಸಿಪಿಆರ್‌ನಲ್ಲಿ ಪಾಸಿಟಿವ್ ಬಂದಿದೆ.
ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ಕಾಡಂಚಿನ ಗ್ರಾಮವಾಗಿದ್ದು, ಈ ಹಿಂದೆಯೂ ಇಲ್ಲಿ ಕೆಎಫ್‌ಡಿ ಪ್ರಕರಣಗಳು ಕಂಡು ಬಂದಿದ್ದವು.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಣವಂತೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿತ್ತು. ಮೊದಲನೇ ಟೆಸ್ಟ್ನಲ್ಲಿ ನೆಗೆಟಿವ್, ಎರಡನೇ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದ್ದರಿಂದ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅತ್ತಿಸರದಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಿರುವ ಕಾರಣ, ಇದೀಗ ಇಲಾಖೆ ಕಾಡಂಚಿನ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಜನರು ಸಹಕಾರ ನೀಡಿದರೆ ಈ ಬಾರಿ ಕೂಡ ಕೆಎಫ್‌ಡಿಯನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಇಲಾಖೆ ಹೇಳಿದೆ. ಕಳೆದ ಮೂರು ವರ್ಷಗಳ ಹಿಂದೆ ಅರಳಗೊಡು ಗ್ರಾಮದಲ್ಲಿ ಸುಮಾರು 22 ಜನ ಕೆಎಫ್‌ಡಿ ರೋಗದಿಂದ ಸಾವನ್ನಪ್ಪಿದ್ದರು.
ಮಂಗನ ಕಾಯಿಲೆ ಪತ್ತೆಯಾಗಿರುವ ಕುರಿತು 'ಈಟಿವಿ ಭಾರತ್' ಜೊತೆ ದೂರವಾಣಿಯಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ಮಂಗನ ಕಾಯಿಲೆ ಪತ್ತೆಯಾಗಿರುವ ಈ ಗ್ರಾಮ ಸೇರಿದಂತೆ ಜಿಲ್ಲೆಯ ಕಾಡಂಚಿನ ಭಾಗದ ಗ್ರಾಮಗಳಲ್ಲಿನ ಜನರ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಈ ಭಾಗದ ಜನರಲ್ಲಿ ಜ್ವರ ಕಂಡುಬಂದರೆ, ಅವರ ರಕ್ತವನ್ನು ಪರೀಕ್ಷಗೆ ಒಳಪಡಿಸಲಾಗುತ್ತಿದೆ. ಈ ಭಾಗದಲ್ಲಿ ಇದುವರೆಗೂ ಸುಮಾರು 400 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಈ ಮಹಿಳೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಈ ಮಹಿಳೆಗೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕೆಎಫ್‌ಡಿ ವಾರ್ಡ್ ತೆರೆಯಲಾಗಿದೆ ಎಂದರು.
ಕೆಎಫ್‌ಡಿ ರೋಗದ ಕುರಿತು: ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸೊರಬ ತಾಲೂಕು ಕ್ಯಾಸನೂರು ಗ್ರಾಮದಲ್ಲಿ. ಅದು 1960ರ ಅಸುಪಾಸು. ಹಾಗಾಗಿ ಇದಕ್ಕೆ ಕೆಎಫ್‌ಡಿ ಕಾಯಿಲೆ ಎಂದು ಕರೆಯುತ್ತಾರೆ. ನಂತರ ಈ ರೋಗ ಜಿಲ್ಲೆಯ ಮುಖ್ಯವಾಗಿ ಕಾಡು ಪ್ರದೇಶದಲ್ಲಿ ಕಂಡು ಬರಲು ಪ್ರಾರಂಭಿಸಿತು. ಕಾಡಿನಲ್ಲಿ ಇರುವ ಸಣ್ಣ ಗಾತ್ರದ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ, ಕೆಎಫ್‌ಡಿ ರೋಗ ಮನುಷ್ಯನಿಗೆ ಬರುತ್ತದೆ. ಉಣ್ಣೆಯ ವಾಹಕವಾಗಿ ಪ್ರಾಣಿಗಳು ಕೆಲಸ ಮಾಡುತ್ತಿವೆ.
ಉಣ್ಣೆಗಳು ಪ್ರಮುಖವಾಗಿ ಕಾಡಿನಲ್ಲಿನ ಮಂಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಎಲ್ಲಿ ಮಂಗಗಳು ಸಾಯುತ್ತವೆಯೋ ಅಲ್ಲಿ ಈ ಉಣ್ಣೆಗಳು ಬೇರೆ ಪ್ರಾಣಿಗಳ ದೇಹವನ್ನು ಆಶ್ರಿಯಿಸುತ್ತವೆ. ಇದಕ್ಮೆ ಇದನ್ನು ಮಂಗನ ಕಾಯಿಲೆ ಎಂದು ಕರೆಯುತ್ತಾರೆ. ಕಾಡಂಚಿನ ಗ್ರಾಮಗಳ ಪ್ರಾಣಿಗಳು ಕಾಡಿಗೆ ಹೋದಾಗ ಈ ಉಣ್ಣೆಗಳು ಎಮ್ಮೆ, ಹಸು, ಕುರಿ, ಮೇಕೆಗಳ ಮೂಲಕ ಗ್ರಾಮಕ್ಕೆ ಬರುತ್ತವೆ. ಹಸು, ಮೇಕೆ, ಕುರಿಗಳು ಮನುಷ್ಯನ ಸಂಪರ್ಕಕ್ಕೆ ಬಂದು ಉಣ್ಣೆಗಳು ಮನುಷ್ಯನಿಗೆ ಕಚ್ಚಿದಾಗ ಮನುಷ್ಯನಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರ ಬಂದವರ ರಕ್ತ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೆಎಫ್‌ಡಿ ಪಾಸಿಟಿವ್, ಇಲ್ಲ ನೆಗೆಟಿವ್ ಪತ್ತೆಯಾಗುತ್ತದೆ.
ನಿರಂತರ ನಾಲ್ಕೈದು ದಿನ ಜ್ವರ ಹೋಗದೆ ಇದ್ದರೆ, ಅವರು ತಕ್ಷಣ ರಕ್ತ ಪರೀಕ್ಷೆ ಮಾಡಿಸಬೇಕಿದೆ. ಈ ರೋಗವು, ಶಿವಮೊಗ್ಗ ಜಿಲ್ಲೆ ಅಲ್ಲದೆ, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರದಲ್ಲೂ ಕಂಡು ಬಂದಿದೆ. ಸದ್ಯ ಈ ರೋಗಕ್ಕೆ ನಿರ್ದಿಷ್ಟ ಚುಚ್ಚುಮದ್ದು ಇಲ್ಲ. ಇದಕ್ಕೆ ಮುಂಜಾಗ್ರತಾ ಕ್ರಮವೇ ಮದ್ದು. ಕಳೆದ ವರ್ಷ ಈ ರೋಗಕ್ಕೆ ವರ್ಷಕ್ಕೆ ಮೂರರಂತೆ ಬೂಸ್ಟರ್ ಡೋಸ್ ನೀಡಲಾಗಿತ್ತು. ಈಗ ಬೂಸ್ಟರ್ ಡೋಸ್ ತಯಾರಿಕೆ ನಿಲ್ಲಿಸಲಾಗಿದೆ. ಕಾಡಂಚಿನ ಗ್ರಾಮದವರಿಗೆ ಆರೋಗ್ಯ ಇಲಾಖೆಯಿಂದ ಕಾಡಿಗೆ ಹೋಗುವವರಿಗೆ ಡಿಎಂಪಿ ಆಯಿಲ್ ನೀಡುತ್ತಾರೆ. ಇದನ್ನು ಕೈ ಕಾಲುಗಳಿಗೆ ಹಚ್ಚಿಕೊಂಡು ಕಾಡಿಗೆ ಹೋಗುವಂತೆ ಹಾಗೂ ಮನೆಗೆ ಬಂದ ನಂತರ ಕೈ ಕಾಲು ತೊಳೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಆಯಿಲ್ಗೆ ಉಣ್ಣೆಗಳು ಅಂಟಿಕೊಳ್ಳುವುದಿಲ್ಲ.
ಇದನ್ನೂ ಓದಿ: ಮಂಗನ ಕಾಯಿಲೆ ಲಸಿಕೆ ಸಂಶೋಧನೆಗೆ ಸರ್ಕಾರದಿಂದ ಆರ್ಥಿಕ ನೆರವು : ದಿನೇಶ್ ಗುಂಡೂರಾವ್