ಶಿವಮೊಗ್ಗ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಸ್ಕೋ ಕೇಸ್ನಲ್ಲಿದ್ದವರ ವಿಚಾರಣೆಗೆ ತೆರಳಿದ್ದ ಹೆಚ್ಚುವರಿ ರಕ್ಷಣಾಧಿಕಾರಿಗಳು, ಶಿಕಾರಿಪುರ ಸಿಪಿಐ ಹಾಗೂ ಸಾಗರದ ಡಿವೈಎಸ್ಪಿ ಈಗ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ 11 ಮಂದಿ ಪೊಲೀಸರ ಗಂಟಲು ದ್ರವ ಮಾದರಿಯನ್ನು ಪಡೆಯಲಾಗಿದೆ. ಈ ಕಾರಣದಿಂದ 4 ಡಿಸೈಎಸ್ಪಿ, 4 ಸಿಪಿಐ ಹಾಗೂ 4 ಪಿಎಸ್ಐಗಳನ್ನು ನೇಮಕ ಮಾಡಲಾಗಿದೆ. ಆದರೆ ಇವರಲ್ಲಿ ಯಾರೂ ಇದುವರೆಗೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್ಡೌನ್ ಮಾಡಿಲ್ಲ, ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಗಾದ ವಿವರ
ಇದುವರೆಗೂ ಜಿಲ್ಲೆಯಲ್ಲಿ 5148 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 4828 ಜನರ ಫಲಿತಾಂಶ ಬಂದಿದೆ. ಇನ್ನೂ 320 ಮಂದಿ ಫಲಿತಾಂಶ ಬರಬೇಕಿದೆ. ಹೊರ ರಾಜ್ಯಗಳಿಂದ ಆಗಮಿಸಿದ್ದ1158 ಜನರನ್ನು ಪರೀಕ್ಷಿಸಿ ಕ್ವಾರಂಟೈನ್ ಮಾಡಲಾಗಿದೆ. ಪ್ರತಿ ದಿನ ಹೊರ ರಾಜ್ಯದಿಂದ 50-70 ಮಂದಿ ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 329 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಂಪರ್ಕ ಹೊಂದಿದವರ ತಪಾಸಣೆ ಕೂಡಾ ನಡೆಸಲಾಗುವುದು ಎಂದರು.
ಬೇರೆ ಜಿಲ್ಲೆಗೆ ತೆರಳಲು ಯಾವುದೇ ಪಾಸ್ ಬೇಕಿಲ್ಲ
ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಇತರ ಜಿಲ್ಲೆಗೆ ತೆರಳಲು ಯಾವುದೇ ಪಾಸ್ ಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ದಾಖಲು
ಕೋವಿಡ್ 19 ಫಲಿತಾಂಶಕ್ಕೆ ಸಂಬಂಧಿಸಿದಂತೆ ಪಾಸಿಟಿವ್ ಬಂದಿರುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಮೊದಲು ಕರ್ತವ್ಯದಲ್ಲಿದ್ದವರನ್ನು ಬದಲಾಯಿಸಲಾಗಿದೆ. ಈ ರೀತಿಯ ವರದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಅಲ್ಲದೆ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.