ಶಿವಮೊಗ್ಗ: ಕೊರೊನಾದ ಈ ಪರಿಸ್ಥಿತಿಯಲ್ಲಿ ನಾವು ಹಸಿವು ಹಾಗೂ ಸಾವನ್ನು ಮೆಟ್ಟಿ ನಿಲ್ಲಬೇಕಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಿ ಮಕ್ಕಳನ್ನು ಬಲಿಕೊಡುವುದು ಬೇಡ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸರ್ಕಾರಕ್ಕೆ ಸಲಹೆ ನೀಡಿದರು.
ಶಿವಮೊಗ್ಗದ ಪ್ರೆಸ್ ಟ್ರಸ್ಟ್ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆಗಸ್ಟ್ 15ರವರೆಗೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು. ಜೂನ್ ಅಂತ್ಯ ಅಥವಾ ಜುಲೈನಲ್ಲಿ ಕೊರೊನಾದ ವಾಸ್ತವ ಸ್ಥಿತಿ ತಿಳಿಯಲಿದೆ. ಬಳಿಕ ಶಾಲೆಗಳನ್ನು ಆರಂಭಿಸುವ ಕುರಿತಂತೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ನಡೆಸಬೇಕು. ಪರೀಕ್ಷೆ ನಡೆಯುವ ಅವಧಿಯಲ್ಲಿ ಲಾಕ್ಡೌನ್ ಜಾರಿಗೊಳಿಸಬೇಕು. ಈ ವೇಳೆ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಹೊರಗೆ ಹೋಗಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಾಲೆ ಆರಂಭಕ್ಕೆ ಮೊದಲೇ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಿಮ್ಮನೆ ರತ್ನಾಕರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅರ್ಧದಷ್ಟು ಶುಲ್ಕ ವಸೂಲಿ ಮಾಡಲು ಮಾತ್ರ ಅವಕಾಶ ನೀಡಬೇಕು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕಿಮ್ಮನೆ ರತ್ನಾಕರ್ ಸರ್ಕಾರವನ್ನು ಆಗ್ರಹಿಸಿದರು.