ಶಿವಮೊಗ್ಗ: ನಗರದ ಕೆ.ಆರ್. ಪುರಂ ಬಡಾವಣೆಯ ಮಹಬೂಬ ಗಲ್ಲಿ ಹಾಗೂ ಭರ್ಮಪ್ಪ ನಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ರಸ್ತೆಯಲ್ಲಿ ಎರಡು ಗುಂಪುಗಳು ಲಾಂಗು-ಮಚ್ಚು ಹಿಡಿದು ಓಡಾಡಿದ್ದರು. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಗಾಂಜಾ ಮಾರಾಟ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.
ರಸ್ತೆಯಲ್ಲಿ ಲಾಂಗು- ಮಚ್ಚು ಝಳಪಿಸಿದ್ದು ಪೊಲೀಸರ ಗಮನಕ್ಕೆ ಬಂದಾಗ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದರು. ಅಂದು ಮಧ್ಯಾಹ್ನ ನಡೆದ ಘಟನೆಯ ನಂತರ ದೊಡ್ಡಪೇಟೆ ಪೊಲೀಸರು ಗಸ್ತು ನಡೆಸಿ 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಡಾರಿಗಳಿಂದ ಲಾಂಗು- ಮಚ್ಚುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿರುದ್ದ ಸೆಕ್ಷನ್400, 143, 144, 147, 148, 323, 504, 506, 307 ಸಹಿತ 149 IPC ಮತ್ತು 400,20,30 ಇಂಡಿಯನ್ ಆರ್ಮ್ಸ್ ಆ್ಯಕ್ಟ್ 1959 ರಂತೆ ಕೇಸು ದಾಖಲಿಸಲಾಗಿದೆ. ಫರಾಜ್, ಪ್ರತಾಪ್, ರಿಜ್ವಾನ್, ಇಮ್ರಾನ್ ಖಾನ್, ಶೇಕ್ ಶಿರಾನ್, ಮೊಹಮದ್ ಇಮ್ರಾನ್ , ಮಹಮ್ಮದ್ ಬಿಲಾಲ್, ಸೈಫುಲ್ಲಾ ಖಾನ್, ಸುಹೇಲ್, ರೋಷನ್ ಹಾಗೂ ಸಮೀರ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.