ಶಿವಮೊಗ್ಗ: ಪಶ್ಚಿಮ ಬಂಗಾಳದಿಂದ ನರ್ಸಿಂಗ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಎಕ್ಸಾಂ ಬರೆಯದೇ ಹೊರಗುಳಿದ ಘಟನೆ ನಡೆದಿದೆ.
ಪಶ್ವಿಮ ಬಂಗಾಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳು ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಕಾಲೇಜಿನಲ್ಲಿ ಪಶ್ಚಿಮ ಬಂಗಾಳದ ಬ್ರೋಕರ್ ಮೂಲಕ ಪ್ರವೇಶ ಪಡೆದಿದ್ದರು. ದೇಶದ ಅನೇಕ ನರ್ಸಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿ ಸಮಸ್ಯೆ ಉಂಟಾಗಿ, ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಪರೀಕ್ಷೆ ಬರೆಯಲು ಕೊನೆಯ ಅವಧಿಯಲ್ಲಿ ಅಸ್ತು ಎಂದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಮೊನ್ನೆ ತನಕ ಪ್ರವೇಶ ಪತ್ರ ಲಭ್ಯವಾಗಿರಲಿಲ್ಲ. ಆದರೂ ಸಹ ಪ್ರವೇಶ ಪತ್ರದ ನಂಬರ್ ಆನ್ಲೈನ್ನಲ್ಲಿ ಪಡೆದಾಗ ಪರೀಕ್ಷೆಗೆ ಅವಕಾಶ ನೀಡಲಾಗಿದೆ.
![nursing students oppose to write exam](https://etvbharatimages.akamaized.net/etvbharat/prod-images/kn-smg-02-nursingstudent-galate-pkg-7204213_06042021183649_0604f_1617714409_966.jpg)
ಕೊರೊನಾ ಕಾರಣಕ್ಕೆ ಆನ್ಲೈನ್ ತರಗತಿಗಳನ್ನು ನಡೆಸಲಾಗಿತ್ತು. ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾದ ಹಿನ್ನೆಲೆ ಈ ವಿದ್ಯಾರ್ಥಿಗಳು ಆಗಮಿಸಿದ್ದರು. ಮೊನ್ನೆಯೇ ಶಿವಮೊಗ್ಗಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಸೋಮವಾರ ಪರೀಕ್ಷಾ ಕೇಂದ್ರವಾದ ಬಾಪೂಜಿ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಆದರೆ ಮಂಗಳವಾರ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ. ಬ್ರೋಕರ್ ಸಹಾಯದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಇವರು ನಮಗೆ ಉಳಿದುಕೊಳ್ಳಲು ಹಾಗೂ ಊಟದ ವ್ಯವಸ್ಥೆ ಮಾಡಿಲ್ಲ, 24 ಮಹಿಳಾ ವಿದ್ಯಾರ್ಥಿಗಳೂ ಇದ್ದು, ನಾವೆಲ್ಲಾ ಯಾವುದೇ ವ್ಯವಸ್ಥೆಯಿಲ್ಲದಲೇ ರಸ್ತೆಯಲ್ಲೇ ಉಳಿದುಕೊಳ್ಳುವಂತಾಗಿದೆ. ಅಲ್ಲದೇ ಪರೀಕ್ಷಾ ಸಮಯ 3 ಗಂಟೆಗಳಿದ್ದು, ಕೇವಲ ಅರ್ಧ ಗಂಟೆಯಷ್ಟೇ ಪರೀಕ್ಷೆಗೆ ಅವಕಾಶ ನೀಡಿ ನಮ್ಮನ್ನು ಕಾಲೇಜಿನಿಂದ ಹೊರ ಕಳಿಸಿದ್ದಾರೆ ಎಂದು ಆರೋಪಿಸಿ ಪರೀಕ್ಷೆ ಬರೆಯದೇ ದೂರ ಉಳಿದಿದ್ದಾರೆ. ನಮಗೆ ನಮ್ಮ ಮೂಲ ದಾಖಲಾತಿಗಳು ಹಾಗೂ ಕಾಲೇಜಿಗೆ ಕಟ್ಟಿದ ಹಣ ವಾಪಸ್ ನೀಡಿ ಎಂದು ಆಗ್ರಹಿಸಿದ್ದಾರೆ.
ಪರೀಕ್ಷೆಯಲ್ಲಿ ಸಹಾಯ ಮಾಡುವ ಬಗ್ಗೆ ಭರವಸೆ:
ವಿದ್ಯಾರ್ಥಿಗಳನ್ನು ಪಶ್ಚಿಮ ಬಂಗಾಳದಿಂದ ಕರೆ ತಂದ ಬ್ರೋಕರ್ ಸೈಯಂದು ಆಚಾರ್ಯ ಮಾತನಾಡಿ, ನಾವು 31 ವಿದ್ಯಾರ್ಥಿಗಳನ್ನು ಕರೆ ತಂದಿದ್ದೇವೆ, ಇಲ್ಲಿ ಪರೀಕ್ಷೆ ಬರೆಯಲು ಆಗಮಿಸಿರುವ ವಿದ್ಯಾರ್ಥಿಗಳಿಗೆ ನೀವು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರ ಬಳಿ ಸಹಾಯ ಕೇಳಿದ್ರೆ, ಸಹಾಯ ಮಾಡ್ತಾರೆ ಅಂತ ಹೇಳಿದ್ದೆ. ಆದರೆ ಹಾಗೆ ಆಗಲಿಲ್ಲ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿಯವರು ನಾವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ. ಆದರೆ ಅವರೇ ಬರೆಯಲು ಹೋಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಓರಿಜಿನಲ್ ದಾಖಲಾತಿ ಕೇಳಿದ್ದಾರೆ. ಮೆಡಿಕಲ್ ಬೋರ್ಡ್ನವರ ಬಳಿ ಚರ್ಚೆ ನಡೆಸಿ, ದಾಖಲೆಗಳನ್ನು ವಾಪಸ್ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.