ಶಿವಮೊಗ್ಗ: ಕೊರೊನಾ ಲಾಕ್ಡೌನ್ನಿಂದಾಗಿ ದೇಶಕ್ಕೆ ದೇಶವೇ ತತ್ತರಿಸಿ ಹೋಗಿದೆ. ಜನ ಮನೆಯಿಂದ ಹೊರ ಬರಲಾಗದೆ ಪರಿತಪಿಸುತ್ತಿದ್ದಾರೆ. ಇದರಿಂದ ಊಟಕ್ಕೂ ಪರದಾಡುವಂತಾಗಿದೆ. ಗ್ರಾಮೀಣ ಭಾಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರೆ ಲಾಕ್ಡೌನ್ನಲ್ಲಿ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ವರದಾನವಾಗಿದೆ. ಇದರಿಂದ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ ಮಾಡುವ ಯಾರೆ ಆದರೂ ಸಹ ಗ್ರಾಮ ಪಂಚಾಯತ್ಗೆ ತಮಗೆ ಉದ್ಯೋಗ ನೀಡಿ ಎಂದು ಅರ್ಜಿ ಬರೆದು ಕೊಟ್ಟರೆ, ಅವರಿಗೆ ಜಾಬ್ ಕಾರ್ಡ್ ಮಾಡಿ ಕೊಡಲಾಗುತ್ತಿದೆ.
ಜಾಬ್ ಕಾರ್ಡ್ದಾರರ ಖಾತೆಗೆ ಹಣ:
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ ಪಂಚಾಯತ್ ಮಾನವ ದಿನಗಳನ್ನು ಸೃಷ್ಟಿಸುತ್ತದೆ. ಇದನ್ನು ಪ್ರತಿ ಗ್ರಾಮ ಪಂಚಾಯತ್ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಗ್ರಾಮ ಪಂಚಾಯತ್ನಲ್ಲಿ ಕೆಲಸ ಮಾಡುವವರಿಗೆ ಜಾಬ್ ಕಾರ್ಡ್ ನೀಡಲಾಗುತ್ತದೆ.
ಪಂಚಾಯತ್ ನೀಡುವ ಕೆಲಸ ಮಾಡುವವರಿಗೆ ವಾರಕ್ಕೊಮ್ಮೆ ಅವರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತದೆ. ಈ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆಯನ್ನು ನೀಡಲಾಗಿದೆ.
ಸದ್ಯ ಬೇಸಿಗೆಯಾಗಿರುವ ಕಾರಣ ಕೆರೆಗಳ ಹೂಳು ತೆಗೆಯುವ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿ ಹೂಳು ತೆಗೆಯಲು 10-15 ಜನ ಗುಂಪು ಮಾಡಿ ಅವರಿಗೆ 10 ಅಡಿ ಉದ್ದ, 15 ಅಡಿ ಅಗಲದ ಹಾಗೂ ಒಂದೂವರೆ ಅಡಿ ಆಳದ ಹೂಳು ತೆಗೆಯಲು ತಿಳಿಸಲಾಗಿರುತ್ತದೆ. ಇವರು ತಮಗೆ ಅನುಕೂಲ ವಿರುವ ಸಮಯದಲ್ಲಿ ಬಂದು ಹೂಳು ತೆಗೆದು ಹೋಗಬಹುದು. ಇದನ್ನು ಪಂಚಾಯತಿಯ ಮೇಸ್ತ್ರಿ ಒಬ್ಬರು ಅಳತೆಯನ್ನು ತೆಗೆದು ಕೊಳ್ಳುತ್ತಾರೆ.
ನಂತರ ಅವರ ಹಾಜರಿಯನ್ನು ಪಡೆಯಲಾಗುತ್ತದೆ. ಶಿವಮೊಗ್ಗದ ಅಬ್ಬಲಗೆರೆ ಗ್ರಾಮ ಪಂಚಾಯತ್ನಲ್ಲಿ ಕೆರೆಯ ಹೂಳು ತೆಗೆಯಲಾಗುತ್ತಿತ್ತು. ಇಲ್ಲಿಗೆ ಖಾತ್ರಿಗೆ ಬರುವವರು ಬೆಳಗೆ 5:30ಕ್ಕೆ ಬಂದು 9 ಗಂಟೆಗೆ ವಾಪಸ್ ಆಗುತ್ತಾರೆ. ಈ ರೀತಿಯಾಗಿ ಪಂಚಾಯತ್ ವ್ಯಾಪ್ತಿಯಲ್ಲಿ 450 ಜನ ಕೆಲಸ ಮಾಡುತ್ತಿದ್ದಾರೆ. ಗ್ರಾಮಕ್ಕೆ ಬೆಂಗಳೂರು ಸೇರಿದಂತೆ ಇತರೆ ಕಡೆಯಿಂದ ಬಂದವರು ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬರುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ದಿ ಖಾತೆ ಸಚಿವರು ಆದ ಕೆ.ಎಸ್.ಈಶ್ವರಪ್ಪ ಹಲವು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ಲಾಕ್ಡೌನ್ನಲ್ಲಿ ಎಲ್ಲೂ ಕೆಲಸವಿರದೆ, ದುಡಿಮೆ ಇಲ್ಲದೆ ಮನೆಯಲ್ಲೆ ಇದ್ದ ನಮಗೆ ಖಾತ್ರಿ ಯೋಜನೆ ವರದಾನವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.