ಶಿವಮೊಗ್ಗ: ರಾಜ್ಯದ ಪ್ರತಿಷ್ಟಿತ ಹುಲಿ ಸಿಂಹಧಾಮಗಳಲ್ಲಿ ಒಂದಾದ ತಾವರೆಕೊಪ್ಪದ ಹುಲಿ ಸಿಂಹಧಾಮಕ್ಕೆ ಹೊಸ ಹುಲಿಯೊಂದರ ಆಗಮನವಾಗಿದೆ.
ಇಲ್ಲಿಗೆ ಮೈಸೂರು ಮೃಗಾಲಯದಿಂದ ಪೂರ್ಣಿಮಾ (11) ಎಂಬ ಹುಲಿಯನ್ನು ಕರೆತರಲಾಗಿದೆ. ಇದರಿಂದ ಸಫಾರಿಯಲ್ಲಿ ಹುಲಿಗಳ ಸಂಖ್ಯೆ 6ಕೇರಿಕೆಯಾಗಿದೆ.
ಸದ್ಯ ಪೂರ್ಣಿಮಾ ಇನ್ನೂ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಿಲ್ಲ. ಹಾಲಿ ಸಫಾರಿಯಲ್ಲಿ ವಿಜಯ, ರಾಮ, ದಶಮಿ, ಸೀತಾ ಹಾಗೂ ಹನುಮ ಎಂಬ ಹೆಸರಿನ ಹುಲಿಗಳಿವೆ. ಇವುಗಳ ಪೈಕಿ ವಿಜಯ, ದಶಮಿ, ರಾಮ ಹಾಗೂ ಸೀತಾ 14 ವರ್ಷ ಹಿರಿದಾದವು. 19 ವರ್ಷದ ಹನುಮ ಸಫಾರಿಯ ಹಿರಿಯ ಹುಲಿ. ಇವೆಲ್ಲವುಗಳ ನಡುವೆ ಪೂರ್ಣಿಮಾ ಕಿರಿಯ ಹುಲಿಯಾಗಿದೆ.
ಪೂರ್ಣಿಮಾ ಎಂಟ್ರಿಯಿಂದ ಸಫಾರಿಯಲ್ಲಿ ಸಂತಾನೋತ್ಪತ್ತಿ ಆಗಬಹುದೆಂಬ ನಿರೀಕ್ಷೆಯಲ್ಲಿ ಸಿಬ್ಬಂದಿಗಳಿದ್ದಾರೆ. ಹಾಲಿ ಇಲ್ಲಿನ ದಶಮಿ ಹಾಗೂ ಸೀತಾ ಗರ್ಭ ಧರಿಸುವ ಸಾಮರ್ಥ್ಯವನ್ನು ಬಹುತೇಕವಾಗಿ ಕಳೆದುಕೊಂಡಿವೆ. ಹೀಗಾಗಿ ಪೂರ್ಣಿಮಾ ಮೇಲೆ ಸಂತಾನೋತ್ಪತ್ತಿಯ ನಿರೀಕ್ಷೆಯೂ ಇದೆ. ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಪೂರ್ಣಿಮಳನ್ನು ಸೆರೆ ಹಿಡಿಯಲಾಗಿತ್ತು.
ಇದನ್ನೂ ಓದಿ: ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ತಾಯಿಗೆ ಧೈರ್ಯ ತುಂಬಿದ ಯುವತಿ
ಎರಡು ವರ್ಷಗಳಿಂದಲೂ ಮೈಸೂರು ಮೃಗಾಲಯದ ರಕ್ಷಣಾ ಕೇಂದ್ರದಲ್ಲಿದ್ದ ಪೂರ್ಣಿಮಾ ಅಷ್ಟೊಂದು ಮೃದು ಸ್ವಭಾವದವಳಲ್ಲ ಎನ್ನಲಾಗಿದೆ. ಪೂರ್ಣಿಮಾಳನ್ನು ಸೆರೆ ಹಿಡಿಯುವ ವೇಳೆ ಕಾಲಿಗೆ ಗಾಯವಾಗಿತ್ತು. ಮೈಸೂರು ಮೃಗಾಲಯದಲ್ಲಿ ನಿರಂತರವಾಗಿ ಚಿಕಿತ್ಸೆ ನೀಡಿದ ಬಳಿಕ ಆಕೆ ಸರಿಯಾಗಿ ನಡೆಯತೊಡಗಿದ್ದಳು. ಆದರೂ ಆಕೆ ಮೃಗಾಲಯದ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿರಲಿಲ್ಲ. ಹೀಗಾಗಿ ತಾವರೆಕೊಪ್ಪ ಸಫಾರಿಯಲ್ಲೂ ಆಕೆಯನ್ನು ಏಕಾಏಕಿ ತಿರುಗಾಡಲು ಬಿಡುವಂತಿಲ್ಲ. ಏಕೆಂದರೆ ಆಕೆ ಬೇರೆ ಹುಲಿಗಳೊಂದಿಗೆ ಕಾಳಗಕ್ಕೆ ಇಳಿಯುವ ಅಪಾಯವೂ ಇದೆ ಎನ್ನಲಾಗಿದೆ.