ಶಿವಮೊಗ್ಗ: "ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಜಿಲ್ಲೆಯಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ" ಎಂದು ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬಳ್ಳಿಗಾವಿಯ ಅಲ್ಲಮಪ್ರಭುವಿನ ಜನ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿ ನೋಡಿ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. ಹಿಂದೆ ಸೊರಬದ ನಾಯಕರು ನಾಲ್ಕು ಬಾರಿ ಸಂಸತ್ ಸದಸ್ಯರಾಗಿದ್ದರು, ಆಗ ಇದೆ ಶಿಕಾರಿಪುರದ ಮತ್ತು ಶಿವಮೊಗ್ಗ ಜಿಲ್ಲೆಯ ಜನರು ಮತ ನೀಡಿದ್ದರು. ಆಗ ಇವರಿಗೆ ನೋವಾಗಲಿಲ್ಲ. ಇದೀಗ ಅವರಿಗೆ ನೋವಾಗಿದೆಯೇ" ಎಂದು ವಾಗ್ದಾಳಿ ನಡೆಸಿದರು.
"ಕೇಂದ್ರದ ಪುರಾತತ್ವ ಇಲಾಖೆಯಿಂದ ಅಲ್ಲಮ ಪ್ರಭು ಜನ್ಮ ಸ್ಥಳ ಅಭಿವೃದ್ಧಿ ಕಾಮಗಾರಿಗೆ ಅನುಮತಿಯನ್ನು ಕೊಡಿಸಲಾಗಿದೆ. ಈ ಅನುಮತಿಯನ್ನು ಒಂದು ವರ್ಷದ ಹಿಂದೆಯೇ ಕೊಡಿಸಲಾಗಿದೆ. ಅಲ್ಲಿ ಮೂರು ಕಾಮಗಾರಿಗೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇವೆ. ಜಾಗ ಮಠದ ಸ್ವಾಮಿಜೀಗಳ ಹೆಸರಿನಲ್ಲಿದೆ. ಅವರ ಖಾತೆಗೆ 50 ಲಕ್ಷ ರೂ ಹಾಕಲಾಗಿದೆ. ಆದರೆ, ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಸಿದ ಅನುದಾನ ತಡೆ ಹಿಡಿಯುವ ಕೆಲಸವನ್ನು ಮಾಡಿದೆ. ಅಲ್ಲಮಪ್ರಭು, ಚಂದ್ರಗುತ್ತಿ, ಸಕ್ಕರೆಬೈಲು ಅಭಿವೃದ್ಧಿಗೆ 17 ಕೋಟಿ ರೂ ಬಿಡುಗಡೆಯಾಗಿರುವುದನ್ನು ತಡೆ ಹಿಡಿದಿದ್ದಾರೆ. ನೀವು ಯಾವ ನೈತಿಕತೆ ಇಟ್ಟುಕೊಂಡು ಪ್ರಶ್ನೆ ಮಾಡುತ್ತೀರಿ. ನೀವು ಈಗ 36 ಕೋಟಿ ರೂ ಹಣವನ್ನು ಮುಖ್ಯಮಂತ್ರಿಗಳಿಂದ ಬಿಡುಗಡೆ ಮಾಡಿಸಬೇಕು" ಎಂದು ಆಗ್ರಹಿಸಿದರು.
"ಮಧು ಬಂಗಾರಪ್ಪನವರು ಕಳೆದ 6 ತಿಂಗಳಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ತನಿಖೆ ಮಾಡಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಪದೇ ಪದೆ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಂಡು ಹಣ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ, ಆ ಪುಣ್ಯಾತ್ಮ ಅದೇ ವಿಮಾನ ನಿಲ್ದಾಣದಿಂದ ಪ್ರತಿ ದಿನ ಒಡಾಡುತ್ತಿದ್ದಾರೆ. ಅವರು ಸಚಿವರಿದ್ದಾರೆ ಸರ್ಕಾರದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲನೆ ಮಾಡಲು ಅವಕಾಶ ಇದೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿಲ್ಲ. ಈಗ ಆರೋಪ ಮಾಡುವುದನ್ನು ಬಿಟ್ಟು ನಿಮಗೆ ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಬೇಕಿದೆ. ನೀರಾವರಿ ಇಲಾಖೆಯಿಂದ 150 ಕೋಟಿ ರೂ ಬಿಡುಗಡೆಯನ್ನು ತಡೆ ಹಿಡಿದ್ದಾರೆ" ಎಂದು ಹೇಳಿದರು.
"ನನ್ನ ಜತೆ ಕಾಮಗಾರಿ ಪರಿಶೀಲನೆಗೆ ಬರುವ ಅಧಿಕಾರಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೆ ಸಂಸದರು ಕರೆದ ಸಭೆಗೆ ಹೋಗ ಬಾರದು ಎಂದು ಧಮ್ಕಿ ಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆದು ಧಮ್ಕಿ ಹಾಕುತ್ತಿದ್ದಾರೆ. ಈ ರೀತಿಯ ಸಣ್ಣತನದ ರಾಜಕೀಯವನ್ನು ಬಿಟ್ಟು ಕೈ ಜೋಡಿಸಿದರೆ ನಿಮ್ಮನ್ನು ಉಸ್ತುವಾರಿ ಸಚಿವನನ್ನಾಗಿ ಮಾಡಿದ್ದಕ್ಕೆ, ನನ್ನನ್ನು ಸಂಸದ ಮಾಡಿದ್ದಕ್ಕೆ ಜನರಿಗೆ ನ್ಯಾಯ ಕೊಟ್ಟಂತಾಗುತ್ತದೆ" ಎಂದರು.
ಇದನ್ನೂ ಓದಿ: ಎಂಪಿ ಚುನಾವಣೆಗೆ ಸೋಮಣ್ಣ ಸೇರಿ ಹಿರಿಯರ ಸ್ಪರ್ಧೆಯ ನಿರ್ಧಾರವನ್ನ ವರಿಷ್ಠರು ಮಾಡ್ತಾರೆ: ವಿಜಯೇಂದ್ರ