ಶಿವಮೊಗ್ಗ: ಸಾಗರ ತಾಲೂಕಿನ ಹಾಲಿ- ಮಾಜಿ ಶಾಸಕರ ಆಣೆ- ಪ್ರಮಾಣ ಧರ್ಮಸ್ಥಳದಲ್ಲಿ ನಡೆದಿದೆ. ಸಾಗರದ ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಅವರು ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ನಡೆಸುವವರಿಂದ ಹಾಗೂ ಮರಳು ಲಾರಿ ಮಾಲೀಕರಿಂದ ಮಾಮೂಲಿ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಪದೆ ಪದೇ ಆರೋಪ ಮಾಡುತ್ತಿದ್ದರು.
ಇದನ್ನು ಶಾಸಕ ಹಾಲಪ್ಪ ನಿರಾಕರಿಸಿದ್ದರೂ ಸಹ, ನೀವು ಹಣ ತೆಗೆದುಕೊಂಡಿಲ್ಲ ಅಂತಾ ಧರ್ಮಸ್ಥಳದಲ್ಲಿ ಬಂದು ಆಣೆ ಮಾಡುವಂತೆ ಆಗ್ರಹಿಸಿದ್ದರು. ಇದಕ್ಕೆ ಶಾಸಕ ಹಾಲಪ್ಪ ಇಂದು ಧರ್ಮಸ್ಥಳದ ಮಂಜುನಾಥೇಶ್ವರನ ಮುಂದೆ ನಾನು ಮರಳು ಗಣಿಗಾರಿಕೆ ಅವರಿಂದ ಹಾಗೂ ಮರಳು ಲಾರಿ ಮಾಲೀಕರಿಂದ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
ಶಾಸಕ ಹಾಲಪ್ಪ ಅವರು ಇಂದು ಬೆಳಗ್ಗೆ 8 ಗಂಟೆಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿ ತಮ್ಮ ಪ್ರಮಾಣದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ನಾನು ಮಾಜಿ ಶಾಸಕರ ಆರೋಪಕ್ಕೆ ಉತ್ತರ ನೀಡಲೇಂದೇ ನಾನು ಧರ್ಮಸ್ಥಳಕ್ಕೆ ಆಗಮಿಸಿದ್ದೇನೆ. ಯಾರಿದಂಲೂ ಹಣ ಪಡೆದಿಲ್ಲ ಎಂದು ಹಿಂದೆಯೇ ಹೇಳಿದ್ದೆ. ನಂತರ ಮಾಜಿ ಶಾಸಕರು ನನ್ನ ಜತೆ, ನನ್ನ ಸ್ನೇಹಿತ ಗಣಪತಿ ಭಟ್ ಬರಬೇಕು ಹಾಗೂ ನನ್ನ ಸಹೋದರ ಪುತ್ರನ ಮೇಲೂ ಸಹ ಆರೋಪ ಮಾಡಿದ್ದರಿಂದ ನನ್ನ ಜೊತೆ ನನ್ನ ಸ್ನೇಹಿತ ಗಣಪತಿ ಭಟ್ ಹಾಗೂ ಸಹೋದರನ ಪುತ್ರ ರವಿ ಅವರು ಸಹ ಆಗಮಿಸಿ ನಾವ್ಯಾರು ಹಣ ಪಡೆದಿಲ್ಲ ಎಂದು ಮಂಜುನಾಥನ ಮುಂದೆ ಪ್ರಮಾಣ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಲಿ ಶಾಸಕ ಹರತಾಳು ಹಾಲಪ್ಪ ಪ್ರಮಾಣ ಮಾಡಿ ಬಂದ ನಂತರ ಎರಡು ಗಂಟೆ ಬಳಿಕ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ತಮ್ಮ ಬೆಂಬಲಿಗರ ಜತೆ ಧರ್ಮಸ್ಥಳಕ್ಕೆ ಬಂದು ಹಾಲಪ್ಪನವರು ಹಣ ಪಡೆದಿದ್ದಾರೆ ಎಂದು ಪ್ರಮಾಣ ಮಾಡಿದ್ದಾರೆ.
ಇದನ್ನೂ ಓದಿ: ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಪಿಯು ಕಾಲೇಜು ಆರಂಭಿಸಲು ತೀರ್ಮಾನ: ಸಿಎಂ ಬೊಮ್ಮಾಯಿ