ಶಿವಮೊಗ್ಗ: ನನಗೆ ಕಳೆದ ರಾತ್ರಿ 12:30ಕ್ಕೆ ಮಿಸ್ಡ್ ಕಾಲ್ ಬಂದಿದೆ. ಕಜಾಕಿಸ್ತಾನದ +7(678)815-46-5 ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ (ಭಾನುವಾರ) ರಾತ್ರಿ 12:30 ಗಂಟೆಗೆ ಖಜಾಕಿಸ್ತಾನದಿಂದ ಮಿಸ್ಡ್ ಕಾಲ್ ಬಂದಿದೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ನೀಡಲಿದ್ದೇನೆ ಎಂದರು.
ಮಹಾರಾಷ್ಟ್ರದ ಜಯೇಶ್ ಅಲಿಯಾಸ್ ಶಾಹೀರ್ ಶೇಕ್ ಎಂಬಾತ ನನ್ನ ಕೊಲೆಗೆ ಯತ್ನ ನಡೆಸಿರುವ ಬಗ್ಗೆ ಎನ್ಐಎಯಿಂದ ಇತ್ತೀಚೆಗೆ ಮಾಹಿತಿ ತಿಳಿದು ಬಂದಿತ್ತು. ಆತ ಪಿಎಫ್ಐ ಕಾರ್ಯಕರ್ತನೆಂದು ಸಹ ಎನ್ಐಎ ತಿಳಿಸಿತ್ತು. ಆದರೆ, ನಿನ್ನೆ ರಾತ್ರಿ ಬಂದ ಮಿಸ್ಡ್ ಕಾಲ್ ಯಾರದ್ದೆಂದು ಗೊತ್ತಿಲ್ಲ. ಹಾಗಾಗಿ ದೂರು ನೀಡಲಿರುವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಬಿಜೆಪಿ ಗೆಲ್ಲಿಸಿದ್ದಕ್ಕೆ ಅಭಿನಂದನೆ: ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಚನ್ನಬಸಪ್ಪ(ಚನ್ನಿ) ಅವರನ್ನು ಗೆಲ್ಲಿಸಿದ ಎಲ್ಲ ಮತದಾರರಿಗೆ ಅಭಿನಂದನೆಗಳು. ಜಾತಿಗೆ ಬೆಲೆ ಕೊಡದೇ ಜಯ ನೀಡಿದ್ದಾರೆ. ಪ್ರತಿ ಬೂತ್ನಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಇದಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಎಲ್ಲ ಸಮಾಜದ ಅಭಿವೃದ್ಧಿಗೆ ಜನ ಬೆಂಬಲ ನೀಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕತ್ವಕ್ಕೆ ಜಯ ತಂದಿದೆ. ಸಂಘಟನೆ, ಅಭಿವೃದ್ಧಿ ಹಾಗೂ ನಾಯಕತ್ವಕ್ಕೆದಿಂದ ನಮ್ಮನ್ನು ಗೆಲ್ಲಿಸಿದ್ದಾರೆ. ನಮಗೆ ಶಾಸಕ ಸಂಖ್ಯೆ ಕಡಿಮೆ ಇರಬಹುದು, ನಮಗೆ ಮತಗಳು ಹೆಚ್ಚಿದೆ. ಕಳೆದ ಭಾರಿ ಶೇ. 36 ರಷ್ಟು ಮತ ಬಂದಿತ್ತು. ಈ ಭಾರಿ ಶೇ 36.4 ರಷ್ಟು ಮತಗಳು ಬಂದಿವೆ. ಈ ಭಾರಿ ಶೇ. 4 ರಷ್ಟು ಮತಗಳು ಹೆಚ್ಚು ಬಂದಿವೆ. ರಾಷ್ಟ್ರೀಯತೆ, ಅಭಿವೃದ್ಧಿ ಹಾಗೂ ನಾಯಕತ್ವಕ್ಕ ಬೆಂಬಲ ನೀಡಿದಕ್ಕೆ ರಾಜ್ಯದ ಜನತೆಗೆ ಧನ್ಯವಾದಗಳು ಎಂದರು. ನಾವು ರಾಜ್ಯದಲ್ಲಿ ವಾಚಿಂಗ್ ಡಾಗ್ ರೀತಿ ಒಳ್ಳೆಯ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ಇನ್ನಷ್ಟು ಹೆಚ್ಚಿನ ಸ್ಥಾನ ನೀಡುವ ಮೂಲಕ ಪ್ರಧಾನಿ ಮೋದಿಗೆ ಬಲ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಟಿಕಲವಾಡಿಯ ಪಿಎಸ್ಐ ಮಂಟೂರು ಅವರು ನೀಡಿದ ದೂರಿನ ಮೇಲೆ ದೂರು ದಾಖಲಾಗಿದೆ. ಆ ಕ್ಷೇತ್ರದ ಶಾಸಕ ಹಸೀನ್ ಶೇಕ್ ಇಂತಹ ದೇಶ ದ್ರೋಹಿ ಘೋಷಣೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು, ಕಾಂಗ್ರೆಸ್ನವರು ಕೂಡ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಕೊಡಲೇ ಪಾಕ್ ಏಜೆಂಟರುಗಳು ಮತ್ತೆ ಹುಟ್ಟಿಕೊಳ್ಳುತ್ತಿದ್ದಾರೆ. ಇವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಜಾತ್ಯತೀತವಾದ ಎಲ್ಲಿ ಹೊಯ್ತು?: ಚುನಾವಣೆ ಮುಗಿದಿದೆ. ಬಿಜೆಪಿ ಕೋಮುವಾದಿ ಪಕ್ಷ, ಹಾಗಾಗಿ ಸೋಲಿಸಬೇಕು ಎಂದು ಜಾತ್ಯತೀತ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಈಗ ಡಿಕೆಶಿ ಒಕ್ಕಲಿಗರ ಲಾಬಿ, ಸಿದ್ದರಾಮಯ್ಯ ಅವರ ಪರ ಕುರುಬರ ಲಾಬಿ ನಡೆದಿದೆ. ಹಾಗಾದರೆ ಇವರ ಜಾತ್ಯತೀತವಾದ ಎಲ್ಲಿ ಹೊಯ್ತು ಅಂತ ಈಶ್ವರಪ್ಪ ಪ್ರಶ್ನಿಸಿದರು.
ಭೋಜೆಗೌಡ ಲಜ್ಜೆಗೇಡಿತನದ ರಾಜಕಾರಣ: ಜೆಡಿಎಸ್ ಎಂಎಲ್ಸಿ ಭೋಜೆಗೌಡರು ಬಹಿರಂಗವಾಗಿ ಚಿಕ್ಕಮಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಫೋನ್ ಮಾಡಿ ಮತಯಾಚನೆ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಸೋತರೂ ಸಹ ಅವರು ಕ್ಷೀರಾಭಿಷೇಕ ಮಾಡಿಸಿಕೊಂಡಿದ್ದಾರೆ. ಇದು ಲಜ್ಜೆಗೇಡಿತನ. ಜೆಡಿಎಸ್ ಪಕ್ಷ ಇಂತಹವರನ್ನು ಯಾಕೆ ಇಟ್ಟುಕೊಂಡಿದೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದರು.
ಯತ್ನಾಳ್ ಅವರ ಭವಿಷ್ಯ ಮುಂದೆ ಏನಾಗಬಹುದು ನೋಡೋಣ. ಮೈಸೂರು ಭಾಗದಲ್ಲಿ ನಮ್ಮ ಸಂಘಟನೆ ಆಗಬೇಕಿದೆ. ಯಾಕೆ ಈ ಸೋಲು ಅಂತ ರಾಜ್ಯಾಧ್ಯಕ್ಷರು ಸಭೆ ಕರೆಯಲಿದ್ದಾರೆ. ಅಲ್ಲಿ ಚರ್ಚೆ ನಡೆಸಿ, ಮುಂದಿನ ಹೋರಾಟಕ್ಕೆ ತೀರ್ಮಾನ ಮಾಡುತ್ತೇವೆ. ಮುಳುಗುವ ಕಾಂಗ್ರೆಸ್ ಹಡಗಿಗೆ ರಾಜ್ಯದ ಗೆಲುವು ಊರುಗೋಲು ಸಿಕ್ಕಂತಾಗಿದೆ. ರಾಜ್ಯದ ಜನರ ತೀರ್ಪುನ್ನು ನಾವು ಒಪ್ಪುತ್ತೇವೆ. ಸೋಲಿಗೆ ನಳೀನ್ ಕುಮಾರ್ ಕಟೀಲ್, ಬೊಮ್ಮಾಯಿ ಅವರು ಮಾತ್ರ ಕಾರಣರಲ್ಲ, ಅದು ಎಲ್ಲರ ಜವಾಬ್ದಾರಿ ಇದೆ ಎಂದು ಈಶ್ವರಪ್ಪ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ 61ನೇ ಹುಟ್ಟುಹಬ್ಬ: ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಶುಭ ಹಾರೈಕೆ