ಶಿವಮೊಗ್ಗ: ಚೆಕ್ ಬೌನ್ಸ್ ಪ್ರಕರಣದಲ್ಲಿ ನನ್ನ ತಟ್ಟೆ ಕ್ಲೀನ್ ಇದೆ. ಮೊದಲು ಬಿಜೆಪಿಯವರು ತಮ್ಮ ತಟ್ಟೆಯನ್ನು ನೋಡಿಕೊಳ್ಳಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಧ್ಯಮದವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಗರಂ ಆದರು.
ಕೋವಿಡ್ ಸಮಯದಲ್ಲಿ ಬಿಜೆಪಿಯವರಿಂದ ಕೋಟಿಗಟ್ಟಲೆ ಹಗರಣ ನಡೆದಿದೆ. ಇದನ್ನು ನಾವು ಹೇಳುತ್ತಿಲ್ಲ. ಅವರ ಪಕ್ಷದವರೇ ಆದ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಗರಣ ನಡೆದಾಗ ಡಿಸಿಎಂ ಆಗಿದ್ದವರು ಆರ್.ಅಶೋಕ್ ಅಲ್ವಾ?. ಬಿಜೆಪಿಯವರು ಯತ್ನಾಳ್ ಹೇಳಿದ್ದಕ್ಕೆ ಮೊದಲು ಉತ್ತರ ಕೊಡಲಿ ಬರಲಿ. ನನ್ನನ್ನು ಟಾರ್ಗೆಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಕ್ಕಳಿಂದ ಶೌಚಾಲಯ ಸ್ವಚ್ಚತೆ ವಿಚಾರ: ಪೆನ್ನು ಹಿಡಿಯುವ ಮಕ್ಕಳ ಕೈಯಲ್ಲಿ ಪೊರಕೆ ಕೊಡಬೇಡಿ. ನನ್ನ ಇಲಾಖೆಯಿಂದ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಶಾಲೆಗಳಲ್ಲಿ ಡಿ ದರ್ಜೆ ನೌಕರರ ಕೊರತೆ ಇದೆ. ಮಕ್ಕಳ ಕೈಯಲ್ಲೇ ಶೌಚಾಲಯ ಸ್ವಚ್ಛತೆ ಮಾಡಿಸಿದ ದೂರುಗಳು ಬಂದರೆ ಪೋಷಕರು ನೇರವಾಗಿ ನನ್ನ ಗಮನಕ್ಕೆ ತನ್ನಿ. ಇದು ತಕ್ಷಣವೇ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ; ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಬಿಜೆಪಿ ಆಗ್ರಹ