ಶಿವಮೊಗ್ಗ: ವಿದ್ಯುತ್ ಗುತ್ತಿಗೆದಾರನಿಗೆ ಟಿಸಿ ನೀಡಲು 20 ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಿದ್ದಾಗ ಮೆಸ್ಕಾಂನ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ರಮೇಶ್ ಬಂಧಿತ ಅಧಿಕಾರಿ. ವಿದ್ಯುತ್ ಗುತ್ತಿಗೆದಾರ ಪ್ರದೀಪ್ ಎಂಬವರು ಬೆಟ್ಟದಕೊರ್ಲಿ ನಿವಾಸಿಯಾಗಿದ್ದು, ವಿದ್ಯುತ್ ಗುತ್ತಿಗೆ ಕೆಲಸವನ್ನು ಕಳೆದ 6 ವರ್ಷಗಳಿಂದ ಮಾಡುತ್ತಿದ್ದಾರೆ. ಇವರು ಕ್ಲಾಸ್ -1 ಗುತ್ತಿಗೆದಾರರು. ಕಪ್ಪುಗುಡ್ಡೆ ಗ್ರಾಮ ಸೇರಿದಂತೆ ವಿವಿಧ ರೈತರಿಗೆ ಒಟ್ಟು 7 ಟಿಸಿಗಳನ್ನು ಮಂಜೂರಾತಿಗೆ ಎಇಇಗೆ ಮನವಿ ಮಾಡಿದ್ದರು. ಟಿಸಿಗಳನ್ನು ನೀಡಲು ಮೆಸ್ಕಾಂ ಎಇಇ 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಪ್ರದೀಪ್ ಶಿವಮೊಗ್ಗ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರಿನನ್ವಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ರಮೇಶ್ ಅವರನ್ನು ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಲೋಕಾಯುಕ್ತ ಸಿಬ್ಬಂದಿಗಳಾದ ಮಹಾಂತೇಶ್, ಸುರೇಂದ್ರ, ಚನ್ನೇಶ್, ಪ್ರಶಾಂತ್ ಕುಮಾರ್, ಅರುಣ್, ದೇವರಾಜ್, ರಘುನಾಯ್ಕ್ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸಿಕ್ಕಿಬಿದ್ದ ಕುಂದಗೋಳ ಬಿಇಒ: ಇತ್ತೀಚೆಗೆ ಕುಂದಗೋಳ ಬಿಇಒ ಡಾ.ವಿದ್ಯಾ ಕುಂದರಗಿ ಅವರ ಧಾರವಾಡ ಹೊಯ್ಸಳ ನಗರ ಬಡಾವಣೆಯ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಎಸ್ಪಿ ಸತೀಶ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕುಂದಗೋಳ ವಲಯ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ವಿದ್ಯಾ ಕುಂದರಗಿ ನಿವೃತ್ತಿ ಹಣ ಮಂಜೂರಿಗೆ ದಾಖಲೆ ರವಾನಿಸಲು ಮಂಜುನಾಥ ಕುರುವಿನಶೆಟ್ಟಿ ಎಂಬವರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಜುನಾಥ ಅವರು ಹರ್ಲಾಪುರ ಗ್ರಾಮದ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದಾರೆ. 8000 ರೂ. ಲಂಚ ಪಡೆಯುವಾಗ ಬಿಇಒ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ: ಲೋಕಾಯುಕ್ತ ಹೆಸರಿನಲ್ಲಿ ತಹಶೀಲ್ದಾರ್ಗೆ ಬೆದರಿಕೆ ಕರೆ: ಆರೋಪಿ ಬಂಧಿಸಿದ ನ್ಯಾಮತಿ ಪೊಲೀಸರು