ಶಿವಮೊಗ್ಗ: ಆನೆ ಕಾಟದಿಂದ ಬೇಸತ್ತಿರುವ ಶಾಸಕ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿಧಾನಸಭಾ ಕ್ಷೇತ್ರದ ಮಲ್ಲಂದೂರು ಗ್ರಾಮದ ಜನತೆ ಮುಂಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಲ್ಲಂದೂರು ಗ್ರಾಮದಲ್ಲಿ ಒಂಟಿ ಕಾಡಾನೆ ಕಾಟ ಹೆಚ್ಚಾಗಿದೆ. ಬೆಳೆದ ಪೈರುಗಳಿಗೆ ಲಗ್ಗೆ ಹಾಕುವ ಕಾಡಾನೆ ಎಲ್ಲವನ್ನು ತಿಂದು, ಹಾಳು ಮಾಡುತ್ತಿದೆ. ನಿನ್ನೆ ರಾತ್ರಿ ಇಲ್ಲಿನ ಶ್ರೀನಿವಾಸ ಎಂಬುವರ ಮನೆ ಹಿತ್ತಲಿನಲ್ಲಿ ಬೆಳೆದ ಬಾಳೆ ಗಿಡ ತಿಂದು ನೆಲಸಮ ಮಾಡಿದೆ. ಯಾವುದೋ ಜಾನುವಾರು ಎಂದು ತಿಳಿದು ಶ್ರೀನಿವಾಸ್ ರವರ ಪತ್ನಿ ಓಡಿಸಲು ಹೋದಾಗ ಆನೆಯನ್ನು ಕಂಡು ಗಾಬರಿಗೊಂಡಿದ್ದಾರೆ.
ನಂತರ ಆನೆಯು ಶ್ರೀನಿವಾಸ್, ಕೃಷ್ಣಯ್ಯ, ಗೋಪಾಲಕೃಷ್ಣ, ಉಮೇಶ್ ಎಂಬುವರ ಭತ್ತದ ಗದ್ದೆಗೆ ನುಗ್ಗಿ ಫಸಲನ್ನು ಹಾಳು ಮಾಡಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಅಲ್ಲದೆ, ಆನೆಯನ್ನು ಓಡಿಸಲು ಹೋದ ಗ್ರಾಮಸ್ಥರ ಮೇಲೆ ದಾಳಿ ಮಾಡಲು ಮುಂದಾಗಿದೆ. ನಂತರ ತಮ್ಮ ಬೆಳೆ ಉಳಿಸಿಕೊಳ್ಳಲು ಆನೆ ಬರುವ ಕಡೆ ಗ್ರಾಮಸ್ಥರು ಬೆಂಕಿ ಹಾಕಿದ್ದಾರೆ.
ಮನವಿಗೆ ಸ್ಪಂದಿಸದ ಗೃಹ ಸಚಿವರು: ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಆನೆ ಹಾವಳಿಯ ಬಗ್ಗೆ ತಿಳಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕಾಗಿ ಮುಂದಿನ ಎಲ್ಲಾ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.