ಶಿವಮೊಗ್ಗ: ಮೈಸೂರಿನಲ್ಲಿ ರದ್ದಾಗಿದ್ದ ಮಹಿಷಾ ದಸರಾವನ್ನು ಭದ್ರಾವತಿಯಲ್ಲಿ ಆಚರಿಸಲಾಗಿದೆ. ಮಹಿಷಾ ದಸರಾವನ್ನು ಮೈಸೂರಿನಲ್ಲಿ ಪ್ರಗತಿಪರರು ಆಚರಿಸಲು ಮುಂದಾದಾಗ ನಡೆಯದಂತೆ ತಡೆಯಲಾಗಿತ್ತು. ಆದರೆ ಪ್ರಗತಿಪರರು ಇಂದು ಭದ್ರಾವತಿ ಪಟ್ಟಣದಲ್ಲಿ ಮಹಿಷಾ ದಸರಾ ಆಚರಿಸಿದ್ದಾರೆ.
ಮಹಿಷಾ ಆಳುತ್ತಿದ್ದ ಇಂದಿನ ಮೈಸೂರಿನಲ್ಲಿ ಚಾಮುಂಡಿ ಆತನನ್ನು ವಧೆ ಮಾಡಿದಳು ಎಂದು ಪುರಾಣ ತಿಳಿಸುತ್ತದೆ. ಚಾಮುಂಡಿ ದಸರಾ ಆಚರಣೆ ಮಾಡಿದಂತೆ ಮಹಿಷಾನ ದಸರಾ ಆಚರಣೆ ಮಾಡುವ ಸಲುವಾಗಿ ಪ್ರಗತಿಪರರು ಭದ್ರಾವತಿಯ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಮಹಿಷಾ ದಸರಾ ಆಚರಣೆ ಮಾಡಿದ್ದಾರೆ. ಮಹಿಷಾನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಗತಿಪರರು ಭಾಷಣ ಮಾಡುವಾಗ ಅದೇ ಮಾರ್ಗದಲ್ಲಿ ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಬಂದ ಬಿಜೆಪಿ ಕಾರ್ಯಕರ್ತರು, ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ದಸರಾ ಆಚರಣೆಗೆ ಪಟ್ಟಣದಲ್ಲಿ ಅಳವಡಿಸಿದ್ದ ಫ್ಲೆಕ್ಸ್ನಲ್ಲಿದ್ದ ಚಾಮುಂಡಿ ದೇವಿಗೆ ಪುಷ್ಪನಮನ ಸಲ್ಲಿಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತ್ರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.