ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ ತೀರ್ಥಹಳ್ಳಿಯ ಬಾಳೆಬೈಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಕೊಂಡು ಪ್ರತಿಭಟನೆ ನಡೆಸಿದರು. ಕೇಸರಿ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ತಡೆದ ಕಾಲೇಜಿನ ಪ್ರಾಂಶುಪಾಲರು ಸರ್ಕಾರದ ಆದೇಶದಂತೆ ಶಾಲಾ - ಕಾಲೇಜಿಗೆ ಸಮವಸ್ತ್ರ ಧರಿಸಿಕೊಂಡು ಬರಬೇಕು. ಉಳಿದಂತೆ ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ತಿಪಟೂರು: ಕಾಲೇಜಿಗೆ ಕೇಸರಿ ಶಾಲು - ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು
ಇದಕ್ಕೆ ಪ್ರತಿಕ್ರಿಯಿಸಿದ ಕೇಸರಿ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿಗಳು ನಮಗೆ ಶಾಲಾ - ಕಾಲೇಜು ಪ್ರವೇಶ ನಿರಾಕರಿಸಿದ ಹಾಗೆಯೇ ಹಿಜಾಬ್ ಧರಿಸಿ ಬಂದವರಿಗೂ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಬಾರದು. ಕೋವಿಡ್ನಿಂದಾಗಿ ಈಗಾಗಲೇ ಶೈಕ್ಷಣಿಕ ಚಟುವಟಿಕೆ ಹಿಂದುಳಿದಿವೆ. ಈಗ ಸಮವಸ್ತ್ರದ ವಿಷಯವಾಗಿ ಶಾಲಾ ಔಪಚಾರಿಕ ಕಲಿಕೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಸ್ಲಿಂ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ: ಶಾಲಾ - ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಗೂ ಬುರ್ಖಾ ಧರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮುಸ್ಲಿಂ ಮಹಿಳಾ ಒಕ್ಕೂಟ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆ.
ಹಿಜಾಬ್ ಧರಿಸದೇ ಸಮವಸ್ತ್ರದಲ್ಲಿ ಶಾಲಾ- ಕಾಲೇಜಿಗೆ ಆಗಮಿಸುವಂತೆ ಸರ್ಕಾರ ನೀಡಿರುವ ಆದೇಶ ಹಿಂಪಡೆಯಬೇಕು. ಮುಸ್ಲಿಂ ಧರ್ಮದಲ್ಲಿ ಮಹಿಳೆಯರು ತಲೆ, ಮುಖವನ್ನು ತೋರಿಸುವಂತಿಲ್ಲ. ಇದರಿಂದ ನಮಗೆ ಹಿಜಾಬ್ ಧರಿಸಲು ಧರ್ಮದಲ್ಲಿಯೇ ಅವಕಾಶ ಇದೆ. ಹಾಗಾಗಿ ಶಾಲಾ - ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.