ಶಿವಮೊಗ್ಗ: ಓದಿದ ವಿದ್ಯಾಭ್ಯಾಸಕ್ಕೂ ಮಾಡುತ್ತಿರುವ ಕಾಯಕಕ್ಕೂ ಯಾವುದೇ ಸಂಬಂದ ಇಲ್ಲ, ಆದ್ರೆ ಮಾಡುವ ಕೆಲಸ ಯಾವುದಾದರೇನು ಶ್ರದ್ಧೆ, ಭಕ್ತಿ ಇರಬೇಕು ಎನ್ನುವುದಕ್ಕೆ ಈ ಯುವಕ ಸಾಕ್ಷಿ.
ಹೌದು, ಈತ ಓದಿದ್ದು ಇಂಜಿನಿಯರಿಂಗ್ ಆದ್ರೆ ಮಾಡುತ್ತಿರುವ ಕೆಲಸ ಮಾತ್ರ ಸೋಡಾ ಮಾರುವುದು. ಈ ಸೋಡಾ ಮಾರುವ ವ್ಯಕ್ತಿಯ ಹೆಸರು ರೋಹಿತ್. 2015ರಲ್ಲಿ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಪದವಿ ನಂತರ ಆ ಕಂಪನಿ ಈ ಕಂಪನಿ ಅಲೆಯದೇ ತಂದೆ ಮಾಡುತ್ತಿದ್ದ ಅಂಗಡಿಯಲ್ಲಿಯೇ ಸೋಡಾ ಮಾರಿಕೊಂಡು ಇತರರಿಗೆ ಮಾದರಿ ಆಗಿದ್ದಾನೆ.
ಈ ಸೋಡಾ ಅಂಗಡಿ ಶಿವಮೊಗ್ಗಕ್ಕೆ ಫೇಮಸ್ ಡಿವಿಎಸ್ ಕಾಲೇಜ್ ಸರ್ಕಲ್ ನಲ್ಲಿರುವ ಈ ಸೋಡಾ ಅಂಗಡಿಗೆ ತನ್ನದೆಯಾದ ಇತಿಹಾಸ ಇದೆ. ನಲವತ್ತೈದು ವರ್ಷಗಳಿಂದ ರೋಹಿತ್ ನ ತಂದೆ ಜಯಣ್ಣನವರು ಈ ಸೋಡಾ ಅಂಗಡಿಯನ್ನ ನಡೆಸಿಕೊಂಡು ಬರುತ್ತಿದ್ದಾರೆ .ಅಷ್ಟೇ ಅಲ್ಲದೆ ಇದರಲ್ಲಿಯೆ ತಮ್ಮ ಬದುಕನ್ನ ಸಹ ಕಟ್ಟಿಕೊಂಡಿದ್ದಾರೆ.
ನಗರದ ಬಹುಪಾಲು ಮಂದಿಗೆ ಡಿವಿಎಸ್ ವೃತ್ತದ ಬಳಿಯಿರುವ ಸೋಡಾ ಅಂಗಡಿ ಅತ್ಯಂತ ಚಿರಪರಿಚಿತ. ಸಾವಿರಾರು ಮಂದಿಗೆ ರೋಹಿತ್ ನೀಡುವ ರುಚಿಕಟ್ಟಾದ ಸೋಡಾಕ್ಕೆ ಇಲ್ಲಿನ ಜನ ಫಿದಾ ಆಗಿದ್ದಾರೆ. ಅಂಗಡಿ ನೋಡುವುದಕ್ಕೆ ಚಿಕ್ಕದಾದರೂ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ದೊಡ್ಡದು. ಮಕ್ಕಳು ,ಹಿರಿಯರು, ವಿದ್ಯಾರ್ಥಿಗಳು, ಮಹಿಳೆಯರು ಪ್ರವಾಸಿಗರು, ಹೀಗೆ ಎಲ್ಲಾ ವರ್ಗದ ಜನರು ದಿನಂಪ್ರತಿ ಇಲ್ಲಿಗೆ ಭೇಟಿ ನೀಡುತ್ತಾರೆ. ಒಮ್ಮೆ ಇಲ್ಲಿನ ಸೋಡಾ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಇನ್ನು ಅನೇಕರು ಇಲ್ಲಿನ ತರಹೇವಾರಿ ಸೋಡಾ, ಸೌತೆಕಾಯಿ ರುಚಿ ಸವಿಯಲೆಂದೇ ವಿವಿಧ ಭಾಗಗಳಿಂದ ಬಂದು ಹೋಗುತ್ತಾರೆ.
ನಗರದ ಹಲವೆಡೆ ತರೇಹವಾರಿ ತಂಪುಪಾನೀಯ ಅಂಗಡಿಗಳು, ಸೋಡಾ ಅಂಗಡಿಗಳಿದ್ದರೂ ಬಹುಪಾಲು ಮಂದಿಗೆ ಇಲ್ಲಿ ಸಿಗುವ ಕಟ್ಟಾ ಮಿಟ್ಟ ಸೋಡಾ, ಪುದಿನ ಸೋಡಾ ,ಜಿಂಜರ್ ಸೋಡಾ, ಸ್ವೀಟ್ ಸೋಡಾ ,ಲೆಮೆನ್ ಸೋಡಾ ಸೌತೆಕಾಯಿ ಸವಿದರಷ್ಟೇ ತೃಪ್ತಿ. ಹಾಗಾಗಿ ರೋಹಿತ್ರ ಮಾಡುವ ಸೋಡಾ ಎಲ್ಲರ ನೆಚ್ಚಿನ ಪಾನಿಯ ಕೇಂದ್ರವಾಗಿ ಮಾರ್ಪಟ್ಟಿದೆ .
ಪ್ರತಿದಿನ ಸಾವಿರಾರು ಮಂದಿ ಸೋಡಾ ಅಂಗಡಿಗೆ ಬರುತ್ತಾರೆ. ಸುತ್ತ ಕಾಲೇಜು, ಸರ್ಕಾರಿ ಕಚೇರಿಗಳು, ಗ್ರಂಥಾಲಯ, ವಿದ್ಯಾರ್ಥಿನಿಲಯಗಳು, ಖಾಸಗಿ ಸಂಸ್ಥೆಗಳು ,ಇರುವುದರಿಂದ ವ್ಯಾಪಾರಕ್ಕೆನು ಧಕ್ಕೆ ಇಲ್ಲಾ ಎನ್ನುತ್ತಾರೆ ಅಂಗಡಿ ಮಾಲೀಕ ಜಯಣ್ಣ.
ಶಿವಮೊಗ್ಗದ ಜನರು ಸುಮಾರು ನಾಲ್ಕು ದಶಕಗಳಿಂದ ಜಯಣ್ಣ ಹಾಗೂ ಅವರ ಮಗ ನೀಡುತ್ತಿರುವ ಸೋಡಾ ಸವಿಯುತ್ತಿದ್ದಾರೆ. ಜಯಣ್ಣರಿಗಿಂತ ಮುಂಚೆ ಜಯಣ್ಣ ಅವರ ತಂದೆ ರಂಗಪ್ಪ ನವರು ಈ ವೃತ್ತಿ ಮಾಡುತ್ತಿದ್ದರು. ನಂತರದಲ್ಲಿ ಜಯಣ್ಣನವರು ವೃತ್ತಿಯನ್ನು ಮುಂದುವರಿಸಿಕೊಂಡು ಬಂದರು. ಆದರೆ ಈಗ ಅವರ ಮಗ ರೋಹಿತ್ ಈ ವೃತ್ತಿಯನ್ನು ಮುಂದುವರಿಸಿಕೊಂಡು ತಂದೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.