ಶಿವಮೊಗ್ಗ: ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಭದ್ರಾವತಿ ಪಟ್ಟಣದ ಕನಕ ಮಂಟಪದಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ''ಭದ್ರಾವತಿಯಲ್ಲಿ ಗಲಾಟೆ ಜಾಸ್ತಿ. ಮಂಡ್ಯದವರು ಬಂದು ಗಲಿಬಿಲಿ ಮಾಡ್ತಿದ್ದಾರೆ. ಸಂಗಮೇಶ್ ಒಂದು ರೀತಿ ಹಸು ಇದ್ದಂಗೆ ಹಾಯುವುದಿಲ್ಲ, ಒದೆಯುವುದಿಲ್ಲ. ಜಿಲ್ಲೆಯ ಏಕೈಕ ಶಾಸಕ ಸಂಗಮೇಶ್ ಆಗಿದ್ದು, ಅವರಿಗೆ ಆಶೀರ್ವಾದ ಮಾಡಿ'' ಎಂದರು.
''ಕಳೆದ ಚುನಾವಣೆಯಲ್ಲಿ ಒಳ್ಳೆ ಕೆಲಸ ಮಾಡಿದ್ದೇವೆ. ನಾವು 70 ಸೀಟು ಪಡೆದುಕೊಂಡಿದ್ದೇವೆ. ಆದರೆ, ಜೆಡಿಎಸ್ಗೆ ಅಧಿಕಾರ ಕೊಟ್ಟೆವು. ಅವರು ಉಳಿಸಿಕೊಳ್ಳಲಿಲ್ಲ. ಜೆಡಿಎಸ್ನವರಿಂದ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯನಾ ಅಂತ ಯೋಚನೆ ಮಾಡಬೇಕು. ಈ ತಾಲೂಕಿನಲ್ಲಿ ಒಕ್ಕಲಿಗ, ಮುಸಲ್ಮಾನ, ಎಸ್ಸಿ, ಎಸ್ಟಿ, ಹಿಂದುಳಿದ, ತಮಿಳು, ವೀರಶೈವರಿದ್ದಾರೆ. ಇಲ್ಲಿ ಜಾತಿ ಮೇಲೆ ರಾಜಕಾರಣ ಮಾಡಬಾರದು, ಇಲ್ಲಿ ನೀತಿ ಮೇಲೆ ರಾಜಕಾರಣ ಮಾಡಬೇಕು. ಕಾಂಗ್ರೆಸ್ ಎಲ್ಲಾ ಜಾತಿಯನ್ನು ಉಳಿಸಿಕೊಂಡು ಹೋಗಬೇಕಿದೆ'' ಎಂದು ಹೇಳಿದರು.
''ವಿಐಎಸ್ಎಲ್ಗೆ 1,619 ಎಕರೆ ಭೂಮಿ ಇದೆ. ವಿಐಎಸ್ಎಲ್ ಖಾಸಗೀಕರಣ ಮಾಡಲು ಹೋದ್ರೂ ಸಹ ಯಾರೂ ಯಾಕೆ ಮುಂದೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಶುದ್ಧವಾದ ವಾತಾವರಣ ಇರಬೇಕು. ಎಲ್ಲಾ ವರ್ಗದವರಿಗೂ ಗೌರವ ಸಿಗಬೇಕು. ಹಿಂದೂಗಳು ನಾವೆಲ್ಲಾ ಒಂದು ಎಂದು ಬಿಜೆಪಿಯವರು ಹೇಳಿದ್ರೆ, ನಾವು ಹಾಗಲ್ಲ ಎಲ್ಲಾ ಸಮಾಜದವರು ನಮ್ಮವರೇ. ನಮ್ಮ ಸರ್ಕಾರ ಇದ್ದಾಗ ನೀಡಿದ ಕಾರ್ಯಕ್ರಮ ಎಲ್ಲಾ ವರ್ಗಕ್ಕೂ ಸಲ್ಲುತ್ತವೆ. ಜಾತಿ, ಧರ್ಮ ಬಿಟ್ಟು ಸಂವಿಧಾನದಲ್ಲಿ ಶಕ್ತಿ ನೀಡಿದ್ದಾರೆ. ಅದರಂತೆ ಸರ್ವರಿಗೂ ಸಮ ಪಾಲು, ಸಮ ಬಾಳು ಎಂಬುದು ಕಾಂಗ್ರೆಸ್ನ ಆಶಯ'' ಎಂದು ತಿಳಿಸಿದರು.
ಕಮಲ ಕೆರೆಯಲ್ಲಿದ್ದರೆ ಚೆಂದ: ''ಕಮಲ ಕೆರೆಯಲ್ಲಿದ್ದರೆ ಚೆಂದ, ತನೆ ಹೊಲದಲ್ಲಿದ್ರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ರೆ ಚೆಂದ ಎಂದ ಅವರು, ಸಿಎಂ ಇಬ್ರಾಹಿಂ ಅವರೇ ನೀವು ಕಮಲ ಬರಲು ಅವಕಾಶ ಮಾಡಿಕೊಡಬೇಡಿ, ತೆನೆ ಭೂಮಿಯಲ್ಲಿಯೇ ಇರಲಿ, ನಿಮಗೆ ಈಗಾಗಲೇ ಒಂದು ಚಾನ್ಸ್ ಕೊಡಲಾಗಿದೆ. ಇಲ್ಲಿ ಬಂದು ಅಡ್ಡದಾರಿಯಲ್ಲಿ ಮಾತನಾಡಲು ಹೋಗಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾಜದ ಎಲ್ಲಾ ವರ್ಗದವರು ಉಳಿಯುತ್ತಾರೆ'' ಎಂದು ಹೇಳಿದರು.
''ಪ್ರಜೆಗಳ ಧ್ವನಿ ಏನು? ಅವರಿಗೆ ಏನೂ ಬೇಕಾಗಿದೆ? ಎಂದು ತಿಳಿದು ಅವರಿಗೆ ಧ್ವನಿಯಾಗಲು ಪ್ರಜಾ ಧ್ವನಿಯಾತ್ರೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಪ್ರಜಾಯಾತ್ರೆಗೆ ಹೋದ ಕಡೆ ಜನರಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ನಾನು, ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಚುನಾವಣೆ ಪ್ರಚಾರ ನಡೆಸಲಿದ್ದೇನೆ'' ಎಂದರು.
''ಈಶ್ವರಪ್ಪ 40 ಪರ್ಸೆಟ್ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಆದರೆ, ಪುನಃ ಕ್ಯಾಬಿನೇಟ್ಗೆ ಬರಲು ಈಶ್ವರಪ್ಪ ಸತತ ಪ್ರಯತ್ನ ಮಾಡುತ್ತಿದ್ದಾರೆ. ಲಂಚ ಹಾಗೂ ಮಂಚಕ್ಕೆ ಹೋದವರನ್ನು ಕರೆಯಿಸಿಕೊಂಡ್ರೆ ಮುಂದೆ ಭಾರಿ ಕಷ್ಟ ಆಗಲಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿಯವರು ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದಾರೆ. 22 ಸಾವಿರ ಕೋಟಿ ರೂ. ಕಾಮಗಾರಿ ನಡೆಸದೇ ಬಿಲ್ ಪಡೆದುಕೊಂಡಿದ್ದಾರೆ. ಈ ಕುರಿತು ಸಿಎಂಗೆ ಗೂಳಿಹಟ್ಟಿ ಪತ್ರ ಬರೆದಿದ್ದಾರೆ. ಈಗ ಪಿಎಂ ಮೋದಿ, ಅಮಿತ್ ಶಾ ಓಡೋಡಿ ಬರ್ತಾ ಇದ್ದಾರೆ. ಆದ್ರೆ ಯಾಕೆ ಜನರ ಸಂಕಷ್ಟದಲ್ಲಿ ನೀವು ಭಾಗಿಯಾಗುತ್ತಿಲ್ಲ'' ಎಂದು ಪ್ರಶ್ನಿಸಿದರು.
ಉಚಿತ ವಿದ್ಯುತ್, 2 ಸಾವಿರ ಹಣ ಖಚಿತ: ''200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಬೆಲೆ ಏರಿಕೆಯಿಂದ ಹೆಣ್ಣುಮಕ್ಕಳಿಗೆ ಅಕೌಂಟ್ಗೆ ಪ್ರತಿ ತಿಂಗಳು 2,000 ರೂ. ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಿಯಾಂಕ ಗಾಂಧಿ ಉದ್ಘಾಟನೆ ಮಾಡಿದ್ದಾರೆ. ಇದನ್ನು ಉಳಿಸಿಕೊಳ್ಳಲು ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಕಾರ್ಡ್ಗೆ ಸಹಿ ಹಾಕಿ, ಮನೆ ಮನೆಗೆ ಹಂಚಲಾಗುವುದು. ನಮ್ಮ ಮಾತನ್ನು ಉಳಿಸಿಕೊಳ್ಳದೇ ಹೋದ್ರೆ ನಿಮ್ಮ ಮುಂದೆ ಬರುವುದಿಲ್ಲ. ಮತಯಂತ್ರದ ಬಟನ್ ಒತ್ತಿದರೆ ದೆಹಲಿಗೆ ಕೇಳಿಸಬೇಕು. ಇಲ್ಲಿ ಸಂಗಮೇಶ್ ಗೆಲ್ಲಿಸಿ, ಮೋದಿಯನ್ನು ಓಡಿಸಿ'' ಎಂದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಮಾಜಿ ಸಂಸದ ಮುನಿಯಪ್ಪ, ಎಚ್.ಎಂ.ರೇವಣ್ಣ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಇದ್ದರು.
ಇದನ್ನೂ ಓದಿ: ವಿಐಎಸ್‌ಎಲ್ ಕಾರ್ಖಾನೆ ಮತ್ತೆ ಆರಂಭವಾಗಿ ಲಾಭದಲ್ಲಿ ನಡೆಯಬೇಕು: ಸಿಎಂ ಬೊಮ್ಮಾಯಿ