ಅದು 1942.. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅನ್ನೋ ಕೂಗು ಇಡೀ ದೇಶ ಆವರಿಸಿತ್ತು. ಆಂಗ್ಲರ ಕೋವಿಯ ಎದುರು ಕೋಲು ಹಿಡಿದ ಫಕೀರನೊಬ್ಬ ಆಜಾದಿ ಮಂತ್ರ ಪಠಿಸಿದ್ದ. ಗಾಂಧೀಜಿ ಅನ್ನೋ ಈ ಬೆಳಕು ಸ್ವಾತಂತ್ರ್ಯ ಚಳವಳಿಗೆ ದಾರಿ ತೋರಿಸಿತು. ಈಸೂರು, ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಈ ಹಳ್ಳಿಯಲ್ಲೂ ಕ್ವಿಟ್ ಇಂಡಿಯಾ ಕೂಗು ಮಾರ್ದನಿಸಿತ್ತು.
1947ಕ್ಕೂ ಮೊದಲೇ ಈಸೂರು ಸ್ವತಂತ್ರಗೊಂಡಿದೆ ಅಂತ ಘೋಷಿಸಿಕೊಂಡು, ಗಾಂಧಿ ಹೆಜ್ಜೆ ಹಿಂಬಾಲಿಸಿತ್ತು. ಗ್ರಾಮಕ್ಕೆ ಯಾರೇ ಸರ್ಕಾರಿ ಅಧಿಕಾರಿ ಬಂದ್ರೂ ಗಾಂಧಿ ಟೋಪಿ ಹಾಕಬೇಕಿತ್ತು. ಅದು ಚಿಣ್ಣರ ಫರ್ಮಾನು.
ಕಂದಾಯ ವಸೂಲಿಗೆ ಬಂದ ತಹಶೀಲ್ದಾರ್‌ಗೆ ಚಿಣ್ಣರೇ, ಗಾಂಧಿ ಟೋಪಿ ಹಾಕ್ತಾರೆ. ಆದ್ರೆ, ಇದಕ್ಕೊಪ್ಪದ ಪೊಲೀಸ್ ಅಧಿಕಾರಿಯ ಹ್ಯಾಟ್ ಹಾರಿಸಿ, ಚಿಣ್ಣರೇ ಆತನಿಗೆ ಗಾಂಧಿ ಟೋಪಿ ಹಾಕ್ತಾರೆ. ಪೊಲೀಸಪ್ಪ ಚಿಣ್ಣರ ಮೇಲೆ ಹಲ್ಲೆ ಮಾಡ್ತಾನೆ. ಪೊಲೀಸರ ಗುಂಡೇಟಿಗೆ ಮಕ್ಕಳು, ಮಹಿಳೆಯರು ಹುತಾತ್ಮರಾಗ್ತಾರೆ. ಶ್ರೀ ವೀರಭದ್ರೇಶ್ವರನ ಆಲಯ ಇದಕ್ಕೆ ಸಾಕ್ಷಿಯಾಗುತ್ತೆ.
ಖಾಕಿ ಕ್ರೌರ್ಯ ಕಂಡ್ಮೇಲೆ ದೇವಾಲಯದ ಗಂಟೆಗಳ ನಾದ, ಹೊಲ, ಮನೆಯೊಳಗಿದ್ದ ಜನರನ್ನೆಲ್ಲ ಅಲ್ಲಿಗೆ ಬರುವಂತೆ ಮಾಡುತ್ತೆ. ಮಕ್ಕಳು, ಮಹಿಳೆಯರ ಸಾವು ಕಂಡ ಜನ ಕೋಲು, ದೊಣ್ಣೆಗಳಿಂದ ಅಧಿಕಾರಿಗಳು, ಪೊಲೀಸರನ್ನೇ ಕೊಲೆಗೈಯ್ತಾರೆ. ಇದನ್ನ ಅರಗಿಸಿಕೊಳ್ಳದ ಕಂಪನಿ ಸರ್ಕಾರ, ಹೆಚ್ಚಿನ ಪಡೆಯನ್ನ ಗ್ರಾಮಕ್ಕೆ ನುಗ್ಗಿಸುತ್ತೆ. ಊರೇ ಸ್ಮಶಾನವಾಗುತ್ತೆ. ಗಂಡಸರೆಲ್ಲ ಊರು ಬಿಡ್ತಾರೆ. ಬ್ರಿಟಿಷ್ ನಾಯಿಗಳು ಮಹಿಳೆಯರ ಮಾನ ದೋಚ್ತಾರೆ.
ಸಾಹುಕಾರ್ ಬಸಪ್ಪನವರ ಮನೆಗೂ ಕೊಳ್ಳಿ ಬೀಳುತ್ತೆ. ಈಸೂರು ಕಿಚ್ಚು ಎಲ್ಲೆಡೆ ಹಬ್ಬುತ್ತೆ. ಆ ವೇಳೆಗೆ 20ಕ್ಕೂ ಹೆಚ್ಚು ಮುಂದಿ ಜೈಲಿಗೆ ತಳ್ಳಲ್ಪಡ್ತಾರೆ. ದೇಶ ದಾಸ್ಯದಿಂದ ಮುಕ್ತಿ ಹೊಂದಿ ಉಳಿದವರ ಬಿಡುಗಡೆಯಾಗುತ್ತೆ. ಸ್ವಾತಂತ್ರ ವೀರ ಹುಚ್ಚರಾಯಪ್ಪ ಕಳೆದ ವರ್ಷ ಅಸುನೀಗಿರೋದು ಈ ಊರಿಗಿರೋ ವೀರ ಪರಂಪರೆ ಸಾರಿ ಹೇಳುತ್ತೆ.
ಯಾವುದೇ ಶಸ್ತ್ರ ಇಲ್ಲದೆ ಕಂಪನಿ ಸರ್ಕಾರವನ್ನೇ ನಡುಗಿಸಿದ್ದು ನಮ್ಮ ಮಲೆನಾಡಿನ ಜನ. ಏಸೂರು ಕೊಟ್ಟರೂ ಈಸೂರು ಕೊಡೆವು ಎಂದಿದ್ದರು ಮೈಸೂರು ಅರಸರು. ಈಸೂರು ಕರುನಾಡಿನಲ್ಲಾದ ಸ್ವಾತಂತ್ರ ಸಂಗ್ರಾಮಕ್ಕೇ ಕೀರ್ತಿಯ ಕಳಶ.