ಶಿವಮೊಗ್ಗ : ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಮಿಕರ ಸಮ್ಮಾನ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ, ಶ್ರಮದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ತಿಳಿಸಿದರು.
ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪಡೆಯುವವರೆಲ್ಲರೂ ಪರಿಶ್ರಮ ಪಟ್ಟಿರುತ್ತಾರೆ, ಯಾವುದೇ ಪ್ರಶಸ್ತಿಯೂ ತಮ್ಮ ಕಾಲ ಬುಡದಲ್ಲಿ ಬರುವುದಿಲ್ಲ, ಅವರ ಕಾರ್ಯ ನಿಜಕ್ಕೂ ಮೆಚ್ಚು ಮೆಚ್ಚುವಂತಹದ್ದು ಎಂದರು.
ದುಡಿಯುವ ಕೈಗಳಿಗೆ ಸಮಾಜ ಸದಾ ಚಿರಋಣಿಯಾಗಿರುತ್ತದೆ, ಕಾರ್ಮಿಕರು ದುರಾಭ್ಯಾಸ, ದುಶ್ಚಟಗಳಿಗೆ ಒಳಗಾಗದೇ ಶಿಸ್ತಿನ ಜೀವನ ನಡೆಸಬೇಕು ಎಂದು ಕರೆಕೊಟ್ಟರು. ಕಾರ್ಮಿಕರು ತಮಗಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು. ಒಂದು ದೇಶ ಸಮೃದ್ದಿಯಾಗಿ ಬೆಳೆಯಲು ಅಸಂಘಟಿತ ಕಾರ್ಮಿಕರ ಶ್ರಮ ಮಹತ್ವದ್ದು ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 150 ಅಸಂಘಟಿತ ಕಾರ್ಮಿಕರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಮಿಕ ನಿರೀಕ್ಷಕ ಭಿಮೇಶ್, ಎಚ್. ಎಚ್. ಹರೀಶ್, ಸೇರಿದಂತೆ ಅಸಂಘಟಿತ ಕಾರ್ಮಿಕರ ಕುಟುಂಬದ ಸದ್ಯಸರು ಉಪಸ್ಥಿತರಿದ್ದರು.