ಶಿವಮೊಗ್ಗ: ಸೊರಬ ಕ್ಷೇತ್ರದಲ್ಲಿ ಮೂಲ ಬಿಜೆಪಿಗರು ಮತ್ತು ವಲಸಿಗರ ಮಧ್ಯೆ ತೆರೆಮರೆಯ ಗುದ್ದಾಟಗಳು ನಡೆಯುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಈ ಬಣ ರಾಜಕೀಯ ಮುಳ್ಳಾಗಬಾರದು ಎಂದು ಸ್ವತಃ ರಾಜ್ಯಾಧ್ಯಕ್ಷರೇ ಸಂಧಾನ ಮಾಡಿ, ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಹೌದು ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ತಮ್ಮ ಆಪ್ತರನ್ನ ತಮ್ಮ ಜೊತೆಯಲ್ಲಿಯೇ ಬಿಜೆಪಿಗೆ ಕರೆತಂದಿದ್ದರು. ಆದರೆ ಕೆಲವು ವರ್ಷಗಳು ಕಳೆದ ನಂತರ ಮೂಲ ಬಿಜೆಪಿಗರು ಮತ್ತು ವಲಸಿಗ ಬಿಜೆಪಿಗರ ಮಧ್ಯೆ ತೆರೆ ಮರೆಯ ಗುದ್ದಾಟಗಳು ಪ್ರಾರಂಭವಾಗಿ ಈಗಲೂ ನಡೆಯುತ್ತಲೇ ಇವೆ.
ಕುಮಾರ್ ಬಂಗಾರಪ್ಪ ಅವರು ತಮ್ಮ ಆಪ್ತರನ್ನು ಹಾಗೂ ತಮ್ಮನ್ನ ನಂಬಿ ಪಕ್ಷಕ್ಕೆ ಬಂದವರನ್ನ ಕಡೆಗಣಿಸದೆ ಅವರಿಗೆ ಸ್ಥಾನ ಮಾನ ಸಿಗುವ ನಿಟ್ಟಿನಲ್ಲಿ ಅವರೊಂದಿಗೆ ಇದ್ದಾರೆ. ಹಾಗಾಗಿ ಮೂಲ ಬಿಜೆಪಿಗರು ಕುಮಾರ್ ಬಂಗಾರಪ್ಪ ಅವರ ಮೇಲೆ ಆರೋಪಗಳು ಮಾಡುತ್ತಲೇ ಬರುತ್ತಿದ್ದಾರೆ.
ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ
ಇದಕ್ಕೆ ನಿದರ್ಶನ ಎಂಬಂತೆ ಪುರಸಭೆ ಅಧ್ಯಕ್ಷರನ್ನ ಅವಿಶ್ವಾಸ ಗೊತ್ತುವಳಿಯ ಮೂಲಕ ವಜಾಗೊಳಿಸಲು ಬಿಜೆಪಿ ಸದಸ್ಯರೇ ಮುಂದಾಗಿದ್ದಾರೆ. ಹಾಗಾಗಿ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರೇ ಶಿವಮೊಗ್ಗಕ್ಕೆ ಬಂದು ಸೊರಬ ಕ್ಷೇತ್ರದ ತಾಲೂಕು ಬಿಜೆಪಿಯಲ್ಲಿನ ಎರಡು ಬಣಗಳನ್ನು ಒಂದು ಮಾಡುವ ಪ್ರಯತ್ನ ನಡೆಸಿದ್ದಾರೆ. ಸಂಘಟನೆ ಇದ್ದ ಮೇಲೆ ಕೆಲವು ಸಣ್ಣ, ಪುಟ್ಟ ಗೊಂದಲಗಳಿರುತ್ತವೆ. ಅವೆಲ್ಲವೂ ಈಗ ಸರಿಯಾಗಿದೆ ಎನ್ನುತ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.
ಕುಮಾರ್ ಬಂಗಾರಪ್ಪ ಆಪ್ತನ ವಿರುದ್ಧ ತಿರುಗಿ ಬಿದ್ದ ಮೂಲ ಬಿಜೆಪಿಗರು
ಸೊರಬ ಪುರಸಭೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ ಬಿಜೆಪಿಯ ಆರು ಸದಸ್ಯರು ಹೊಂದುವ ಮೂಲಕ ಸೊರಬ ಪುರಸಭೆಯ ಗದ್ದುಗೆಯನ್ನ ಬಿಜೆಪಿ ಏರಿದೆ. ಕಾಂಗ್ರೆಸ್ನ ನಾಲ್ಕು ಸದಸ್ಯರು, ಜೆಡಿಎಸ್ನ ಒಬ್ಬರು ಹಾಗೂ ಒಬ್ಬ ಪಕ್ಷೇತರರಿದ್ದಾರೆ. ಆದರೆ, ಈಗ ಕುಮಾರ್ ಬಂಗಾರಪ್ಪ ಅವರ ಅಣತಿಯಂತೆ ಪುರಸಭೆ ಅಧ್ಯಕ್ಷ ಉಮೇಶ್ ಅವರು ಕಾರ್ಯನಿರ್ವಹಿಸುತ್ತಿದ್ದು, ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ.
ಒಂದೆಡೆ ಶಾಸಕ ಕುಮಾರ್ ಬಂಗಾರಪ್ಪ ಅವರ ಜೊತೆಗೆ ಮೂರು ದಶಕಗಳ ಕಾಲ ಅವರ ರಾಜಕೀಯ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಮೇಶ್ ಅವರನ್ನು ಪುರಸಭೆ ಅಧ್ಯಕ್ಷ ಗಾದಿಗೆರಿಸಲು ಶತಪ್ರಯತ್ನ ನಡೆಸಿದ್ದ ಶಾಸಕರಿಗೆ, ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಶಾಸಕರ ಬಣದಲ್ಲಿ ಗುರುತಿಸಿಕೊಂಡ ವ್ಯಕ್ತಿ ಅಧ್ಯಕ್ಷರಾಗಿ ಆಯ್ಕೆ ಆಗಬಾರದು ಎಂದು ತಂತ್ರಗಾರಿಕೆ ಸಹ ರೂಪಿಸಿದ್ದರು.
ಕೊನೆಗೆ ಶಾಸಕರ ಬಣ, ತಮ್ಮ ಸೋಲು ಗೆಲುವಿನ ಜೊತೆಗಿದ್ದ ಆಪ್ತ ಉಮೇಶ್ ಅವರಿಗೆ ಪುರಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಪ್ರಭಾವ ತೋರಿದ್ದರು. ಆದರೆ, ಈಗ ಉಮೇಶ್ ಅವರನ್ನು ಬದಲಿಸಬೇಕು ಎಂದು ಪಕ್ಷಾತೀತವಾಗಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ.
ಎಲ್ಲವೂ ಸರಿಯಾಗುತ್ತೆ ಅನ್ನೋದು ಶಾಸಕರ ವಿಶ್ವಾಸ
ಸೊರಬ ಕ್ಷೇತ್ರದ ಪುರಸಭೆಯಲ್ಲಿ ಸಾಕಷ್ಟು ಹೈಡ್ರಾಮಾಗಳು ನಡೆದಿವೆ. ಈಗ ಪಕ್ಷದ ರಾಜ್ಯಾಧ್ಯಕ್ಷರೇ ಒಂದು ಸಂಧಾನ ಮಾಡಿರುವುದರಿಂದ ಪುರಸಭೆ ಅಧ್ಯಕ್ಷ ಉಮೇಶ್ ಅವರನ್ನು ಬದಲಿಸಬೇಕಾ ಬೇಡ್ವಾ ಎನ್ನುವುದನ್ನು ಪಕ್ಷ ತಿರ್ಮಾನಿಸುತ್ತದೆ. ಪಕ್ಷದಲ್ಲಿ ಬಣ ರಾಜಕೀಯ ಇಲ್ಲ, ಇದ್ದ ಸಣ್ಣಪುಟ್ಟ ಗೊಂದಲಗಳನ್ನು ರಾಜ್ಯಾಧ್ಯಕ್ಷರೇ ಬಂದು ಸರಿಮಾಡಿದ್ದಾರೆ ಎಲ್ಲವೂ ಸರಿಯಾಗಿದೆ ಎನ್ನುತ್ತಾರೆ ಶಾಸಕ ಕುಮಾರ್ ಬಂಗಾರಪ್ಪ.
ಒಟ್ಟಾರೆ ಸೊರಬ ಕ್ಷೇತ್ರದ ರಾಜಕೀಯ ಮೂಲ ಬಿಜೆಪಿಗರು ಹಾಗೂ ವಲಸಿಗರ ಮಧ್ಯೆ ಮೊದಲಿಂದಲೂ ತೆರೆಮರೆಯ ಕಿತ್ತಾಟಗಳು ನಡೆಯುತ್ತಲೇ ಇದ್ದು, ಈಗ ಪಕ್ಷದ ರಾಜ್ಯಾಧ್ಯಕ್ಷರವರೆಗೆ ಹೋಗಿದೆ. ಹಾಗಾಗಿ ಪಕ್ಷದ ರಾಜ್ಯಾಧ್ಯಕ್ಷರೇ ಖುದ್ದು ಬಂದು ಎರಡೂ ಬಣಗಳನ್ನು ಕೂತು ಮಾತನಾಡಿಸಿ ಸಂಧಾನ ಮಾಡಿ ಪಕ್ಷ ಸಂಘಟನೆಗೆ ತೊಡಗಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಈ ಬಣ ರಾಜಕೀಯ ಮಧು ಬಂಗಾರಪ್ಪಗೆ ಅನುಕೂಲ ಮಾಡಿಕೊಡುತ್ತಾ?
ಆದರೆ, ಬಿಜೆಪಿಗರ ಈ ಕಿತ್ತಾಟ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಗೊಂಡಿರುವ ಮಧು ಬಂಗಾರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುತ್ತಾ ಅಥವಾ ಮೂಲ ಬಿಜೆಪಿಗರು ವಲಸಿಗ ಬಿಜೆಪಿಗರು ಒಟ್ಟಾಗಿ ಪಕ್ಷ ಸಂಘಟಿಸುವ ಮೂಲಕ ಕುಮಾರ್ ಬಂಗಾರಪ್ಪ ಅವರಿಗೆ ಶಕ್ತಿ ತುಂಬುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.