ಶಿವಮೊಗ್ಗ: ಲಂಬಾಣಿ ತಾಂಡಗಳಿಗೆ ಸಂಚಾರಿ ವಾಹನದ ಮೂಲಕ ಮದ್ಯ ಮಾರಾಟ ಮಾಡುವುದಾಗಿ ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಹೆಚ್.ನಾಗೇಶ್ ಹಾಗೂ ಬಂಜಾರ ಸಮುದಾಯದ ಎಂಟು ಜನ ಶಾಸಕರು ಹಾಗೂ ಒಬ್ಬರು ಸಂಸದರ ವಿರುದ್ಧ ಬಂಜಾರ ಸಮುದಾಯ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗೋಪಿ ವೃತ್ತದಲ್ಲಿ ಮದ್ಯದ ಬಾಟಲಿಯನ್ನು ರಸ್ತೆಯ ಮೇಲಿಟ್ಟು ಹಾಗೂ ಹೂವಿನ ಹಾರಕ್ಕೆ ಬಾಟಲಿ ಕಟ್ಟಿ ನಾಗೇಶ್ ಭಾವಚಿತ್ರಕ್ಕೆ ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ, ಬಂಜಾರ ಸಮುದಾಯದ ಎಂಟು ಜನ ಶಾಸಕರು ಹಾಗೂ ಒಬ್ಬ ಸಂಸದರಿದ್ದರೂ ಸಹ ಯಾರು ಈ ಹೇಳಿಕೆ ಕುರಿತಾಗಿ ಮಾತನಾಡಿಲ್ಲ. ಚುನಾವಣೆ ಬಂದಾಗ ಮಾತ್ರ ಸಮುದಾಯದ ಹೆಸರು ಹೇಳಿಕೊಂಡು ಮತ ಕೇಳಲು ಬರುತ್ತಾರೆ. ಆದರೆ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ ನಾಗೇಶ್ ವಿರುದ್ಧ ಧ್ವನಿ ಎತ್ತುತ್ತಿಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ, ಅಬಕಾರಿ ಸಚಿವ ನಾಗೇಶ್ ಅವರನ್ನ ಸಚಿವ ಸಂಪುಟದಿಂದ ಕೈ ಬೀಡಬೇಕು ಹಾಗೂ ಬಹಿರಂಗವಾಗಿ ಬಂಜಾರ ಸಮುದಾಯದಕ್ಕೆ ಕ್ಷಮೆ ಯಾಚಿಸಬೇಂಕೆಂದು ಒತ್ತಾಯಿಸಿದರು.