ಶಿವಮೊಗ್ಗ : ತಮ್ಮ ಹಣವನ್ನು ಸೇಫ್ ಎಂದು ಗ್ರಾಹಕರು ಬ್ಯಾಂಕ್ನಲ್ಲಿ ಇಟ್ಟರೆ, ಹಣ ಸಂರಕ್ಷಿಸಬೇಕಾದ ಬ್ಯಾಂಕ್ ಸಿಬ್ಬಂದಿಯೇ ದುರುಪಯೋಗಪಡಿಸಿಕೊಂಡು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರಕರಣದ ಸಂಬಂಧ ಹೊಸನಗರ ತಾಲೂಕಿನ ನಗರ ಹೋಬಳಿಯ ಕೆನರಾ ಬ್ಯಾಂಕ್ನ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸುನೀಲ್ ತೀರ್ಥಹಳ್ಳಿ ಎಂಬುವರನ್ನು ಬಂಧಿಸಲಾಗಿದೆ.
ಸುನೀಲ್ ಅವರು ಕಳೆದ 3 ತಿಂಗಳಿಂದ ಯಡೂರಿನ ಕೆನರಾ ಬ್ಯಾಂಕ್ಗೆ ಸಹಾಯಕ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಡೂರಿನ ಗಣೇಶ್ ಜಿ.ಎಸ್ ಗೌಡ ಎಂಬುವರು ವಿದೇಶದಲ್ಲಿ ನೆಲೆಸಿದ್ದು, ಈ ಬ್ಯಾಂಕ್ನಲ್ಲಿ NRE (NON RESIDENT EXTERNAL TERM DOPOSITE) ಅಡಿ ಒಟ್ಟು 8 ಡೆಪಾಸಿಟ್ ಖಾತೆಯನ್ನು ಹೊಂದಿದ್ದಾರೆ. ತಮ್ಮ ಖಾತೆಯಲ್ಲಿ ಒಟ್ಟು 1 ಕೋಟಿ ಹಣ ಇಲ್ಲವೆಂದು ಇ ಮೇಲ್ ಮೂಲಕ ಶಿವಮೊಗ್ಗದ ಪ್ರಾದೇಶಿಕ ಕಚೇರಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ದೇವರಾಜ್ ಅವರಿಗೆ ದೂರು ನೀಡಿದ್ದರು.
ಈ ಕುರಿತು ಬ್ಯಾಂಕ್ ಮ್ಯಾನೇಜರ್ ಅನುಮಾನಗೊಂಡು ಪರಿಶೀಲಿಸಿದ್ದು, ಹಣ ಕಾಣೆಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 23 ರಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಅವರ ಎನ್ಆರ್ಇ ಖಾತೆಯಿಂದ ಯಾರಿಗೂ ತಿಳಿಯುವುದಿಲ್ಲವೆಂದು ಅಕ್ರಮವಾಗಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸುನೀಲ್ ತೀರ್ಥಹಳ್ಳಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಡಿಸೆಂಬರ್ 1 ರಿಂದ ಡಿಸೆಂಬರ್ 15 ರ ತನಕ 10 ವರ್ಗಾವಣೆಗಳಲ್ಲಿ 49,87,874 ರೂ.ಗಳನ್ನು ಅಧಿಕಾರಿಗಳ ಲಾಗಿನ್ ಐಡಿಯಿಂದ ತಮ್ಮ ತಂದೆ ಸುರೇಶ್ ಅವರಿಗೆ ಸೇರಿದ ಕೋಣಂದೂರು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅದೇ ರೀತಿ ತಮ್ಮ ಪತ್ನಿ ವಿದ್ಯಾ ಅವರ ಎಸ್ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡಿದ್ದು, ಬಳಿಕ ಗ್ರೋ ಸ್ಟಾಕ್ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕುರಿತು ಪ್ರಾದೇಶಿಕ ಬ್ಯಾಂಕ್ ಸಿಬ್ಬಂದಿ ತನಿಖೆಗೆಂದು ಡಿಸೆಂಬರ್ 21 ರಂದು ಬ್ಯಾಂಕ್ಗೆ ಬರುವ ವಿಚಾರ ತಿಳಿದ ಸುನೀಲ್, ಅಂದು ಬೆಳಗ್ಗೆ ಬ್ಯಾಂಕ್ಗೆ ಬಂದು ತನ್ನ ಮಡದಿಗೆ ಹುಷಾರಿಲ್ಲ, ನಾನು ಮನೆಗೆ ಹೋಗಬೇಕೆಂದು ಹೇಳಿ ಹೋಗಿದ್ದಾರೆ. ಬ್ಯಾಂಕ್ನಿಂದ ಹೊರ ಹೋಗಿದ್ದ ಸುನೀಲ್, ಯಡೂರಿನಿಂದ ಸಾಗರಕ್ಕೆ ಬಂದು ಲಾಡ್ಜ್ ರೂಮ್ ಬಾಡಿಗೆ ಪಡೆದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಲಾಡ್ಜ್ ಪತ್ತೆ ಹಚ್ಚಿ, ಸುನೀಲ್ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಈ ಸಂಬಂಧ ಯಡೂರು ಪೊಲೀಸ್ ಠಾಣೆಯಲ್ಲಿ ಸುನೀಲ್, ಸುನೀಲ್ ತಂದೆ ಹಾಗೂ ಸುನೀಲ್ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ಗೆ ಸಂಬಂಧಿಸಿದ ನಾಲ್ವರು ಆರೋಪಿಗಳ ಬಂಧನ