ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ಐದು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಭೋರ್ಗರೆದು ಹರಿಯುತ್ತಿದೆ. ಆಗಸ್ಟ್ ಮೊದಲ ವಾರದಿಂದಲೇ ಸಾಗರ ಹಾಗೂ ಹೊಸನಗರ ಭಾಗದಲ್ಲಿ ಮಳೆ ಜೋರಾಗಿದ್ದು ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದೆ.
![Amazing scenic view of the world famous Jog falls](https://etvbharatimages.akamaized.net/etvbharat/prod-images/kn-smg-06-jog-falls-beauty-pkg-ka10011_08082020152849_0808f_1596880729_693.jpg)
ಮಂಜು ಕವಿದ ಜೋಗ ಜಲಪಾತ ವೀಕ್ಷಣೆಯೇ ಒಂದು ಸುಂದರ ಅನುಭವ. ಇದಕ್ಕಾಗಿಯೇ ಕವಿ ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದಿದ್ದಾರೆ. ಈ ಬಾರಿ ಮುಂಗಾರು ಚುರುಕುಗೊಂಡು ಜೋಗ ಜಲಪಾತದ ಅಂದವನ್ನು ಹೆಚ್ಚಿಸಿದೆ. ಹೌದು, ಈ ಅವಧಿಯಲ್ಲಿ ಜಲಪಾತ ಮಂಜಿನ ನಡುವೆ ಕಣ್ಮರೆಯಾಗುತ್ತದೆ. ನೋಡು ನೋಡುತ್ತಿದ್ದಂತೆ ಜಲಪಾತ ಮಂಜಿನ ನಡುವೆ ಕಾಣದಂತಾಗುತ್ತದೆ. ಈ ಮಂಜಿನಾಟ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವೇ ಇಲ್ಲ.
ಕೊರೊನಾ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ, ಈಗ ಜೋಗ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬರುವ ಎಲ್ಲ ಪ್ರವಾಸಿಗರಿಗೂ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ನೀಡಿ ಜಲಪಾತ ವೀಕ್ಷಣೆಗೆ ಅವಕಾಶವಿದೆ. ಇದೀಗ ಕೊರೊನಾ ನಡುವೆಯೂ ಜಲಧಾರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ ಎನ್ನುತ್ತಾರೆ ಪ್ರವಾಸಿಗ ಶಶಿಕುಮಾರ್.