ಶಿವಮೊಗ್ಗ: ಅಂಟಿಗೆ-ಪಿಂಟಿಗೆ ಮಲೆನಾಡಿನ ಪುರಾತನ ಜಾನಪದ ಕಲೆಗಳಲ್ಲಿ ಒಂದು. ಈ ಕಲೆಯನ್ನು ಜಿಲ್ಲೆಯ ಮಲೆನಾಡಿನ ಭಾಗಗಳಾದ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇಂತಹ ಜಾನಪದ ಕಲೆಯನ್ನು ಹೊಸನಗರ ತಾಲೂಕು ಯಡೂರು ಗ್ರಾಮಸ್ಥರು ತಮ್ಮ ಸರ್ಕಾರಿ ಶಾಲೆ ಉಳಿಸಿ-ಬೆಳೆಸಲು ಜಾನಪದ ಕಲೆಯಾದ ಅಂಟಿಗೆ-ಪಿಂಟಿಗೆ ಮೋರೆ ಹೋಗಿದ್ದಾರೆ.
ಹೀಗಿರುತ್ತೆ ಜಾನಪದ ಕಲೆಯ ಆಚರಣೆ.. ಈ ಜಾನಪದ ಕಲೆ ಆಚರಣೆಯಲ್ಲಿ ಒಂದು ಗುಂಪು ಸೇರಿಕೊಂಡು ಜಾನಪದ ಹಾಡನ್ನು ಹಾಡುತ್ತ ಗ್ರಾಮದ, ಪಟ್ಟಣದ ಮನೆ ಮನೆಗೆ ಹೋಗುತ್ತಾರೆ. ಓರ್ವ ಮುಂದೆ ದೀಪವನ್ನು ಹಿಡಿದು ಸಾಗಿದರೆ, ಹಿಂದಿನವರು ಹಾಡುತ್ತ ಸಾಗುತ್ತಾರೆ. ಈ ಗುಂಪಿನಲ್ಲಿ ಇಬ್ಬರು ಹಾಡು ಹಾಡುತ್ತಿದ್ದರೆ, ಉಳಿದವರು ಅದಕ್ಕೆ ಧ್ವನಿಗೂಡಿಸುತ್ತ ಜೊತೆಗೆ ಹೆಜ್ಜೆ ಹಾಕುತ್ತಾರೆ. ಹೀಗೆ ಮನೆ ಮನೆಗೆ ಹೋಗಿದವರನ್ನು ಯಾರೂ ಕೂಡ ಬರಿಗೈಯಲ್ಲಿ ಕಳುಹಿಸುವುದಿಲ್ಲ. ತಮ್ಮ ಮನೆಯಲ್ಲಿ ಇರುವ ಹಣ, ದವಸ ಧಾನ್ಯ ಹೀಗೆ ಏನನ್ನಾದರೂ ಕೊಟ್ಟು ಕಳುಹಿಸುತ್ತಾರೆ. ಹೀಗೆ ಪಡೆದ ಹಣ, ದವಸವನ್ನು ಕೊನೆಯಲ್ಲಿ ಊರಿನ ಎಲ್ಲಾರಿಗೂ ಊಟ ಹಾಕಿಸಿ ಅಲ್ಲಿಗೆ ಅಂಟಿಗೆ ಪಿಂಟಿಗೆಯನ್ನು ಮುಕ್ತಾಯ ಮಾಡುತ್ತಾರೆ.
ಬಂದ ಕಾಣಿಕೆ ಹಣದಲ್ಲಿ ಶಾಲೆಯ ಅಭಿವೃದ್ಧಿ.. ಈ ತಂಡ ಕಳೆದ ಒಂದು ವರ್ಷದಿಂದ ಈ ಆಚರಣೆಯನ್ನು ಮಾಡಿಕೊಂಡು ಬರುತ್ತಿದೆ. 60 ವರ್ಷ ಹಿರಿಯದಾದ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸಂಗ್ರಹವಾದ ಹಣದಿಂದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಈ ಅಭಿವೃದ್ಧಿ ಕಾರ್ಯವನ್ನು ಶಾಲಾ ಎಸ್ಡಿಎಂಸಿ ಹಾಗೂ ಗ್ರಾಮದ ಯುವಕರ ತಂಡದವರು ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಶಾಲೆ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಜ್ರ ಮಹೋತ್ಸವಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ತಿಳಿಸಿದ್ದಾರೆ.
ಇನ್ನು, ಈ ಕಲೆಯು ನಮ್ಮ ಹಿರಿಯರು ಸುಗ್ಗಿಯ ಕಾಲದಲ್ಲಿ ಆಚರಿಸಿಕೊಂಡು ಬರುತ್ತಿದ್ದರು. ಈಗ ನಮ್ಮ ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮದ ಯುವಕರ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀಂದ್ರ ಧನ್ಯವಾದ ಹೇಳಿದ್ದಾರೆ.
ಜಾತಿ ಧರ್ಮ ನೋಡದೇ ಕಾಣಿಕೆ.. ಎಲ್ಲರಿಂದಲೂ ಕಾಣಿಕೆ ಇದೇ ಅನುಸಾರ ಗ್ರಾಮದ ಪ್ರತಿ ಮನೆಗೆ ಯಾವುದೇ ಜಾತಿ-ಭೇದವಿಲ್ಲದೆ ಗ್ರಾಮದ ಯುವಕರ ತಂಡ ಹೋಗಿ ಅಲ್ಲಿ ಅವರು ನೀಡಿದ ಕಾಣಿಕೆಯನ್ನು ಪಡೆದುಕೊಂಡು ಬರುತ್ತಾರೆ. ತಂಡ ಗ್ರಾಮದ ಜಮೀಲ ಬೇಗಂ ಅವರ ಮನೆಗೆ ಹೋದಾಗ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿ ಕಾಣಿಕೆ ನೀಡಿದ್ದಾರೆ. ಯಾವುದೇ ಧರ್ಮ ಎನ್ನದೆ ಎಲ್ಲರೂ ಸಹ ಸಹಕಾರ ನೀಡುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಜಮೀಲ ಬೇಗಂ ರವರು.
ಒಟ್ಟಿನಲ್ಲಿ ಜಾನಪದ ಕಲೆ ಆಚರಣೆಯಿಂದಾಗಿ ಶಾಲೆಯೊಂದು ಅಭಿವೃದ್ಧಿಗೊಳ್ಳುತ್ತಿರುವುದು ಗ್ರಾಮಸ್ಥರು ಸೇರಿದಂತೆ ಉಳಿದವರಿಗೆ ಸಂತಸ ತಂದಿದೆ.