ರಾಮನಗರ: ದೇವರು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯವಿಲ್ಲ, ಹಾಗಾಗಿ ತಾಯಿಯನ್ನು ಸೃಷ್ಠಿಸಿದ ಅಂತಾರೆ. ಈ ಮಾತು ಅಕ್ಷರಶಃ ಸತ್ಯ. ಆಧುನಿಕ ಯುಗದಲ್ಲಿ ವಿಭಜಿತ ಕುಟುಂಬಗಳ ವ್ಯಾಮೋಹವೋ, ಒತ್ತಡವೋ ಅಥವಾ ಇನ್ನಾವುದೋ ಕಾರಣಕ್ಕೆ ಹೆತ್ತವರನ್ನೇ ದೂರ ಮಾಡಿ ವೃದ್ಧಾಶ್ರಮಕ್ಕೆ ಕಳುಹಿಸುವ ಮಂದಿಯ ನಡುವೆ ತಾಯಿಯ ನೆನಪಿಗಾಗಿ ದೇವಾಲಯವನ್ನೇ ಕಟ್ಟಿಸಿ ಇಲ್ಲೊಬ್ಬ ವ್ಯಕ್ತಿ ತಾಯಿಭಕ್ತಿ ಮೆರೆದಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪವಿರುವ ಕೆಮ್ಮಾಳೆ ಗ್ರಾಮದಲ್ಲಿ ತನ್ನ ತಾಯಿ ನೆನಪಿಗಾಗಿ ಗೋಪಾಲ್ ಎಂಬುವವರು ದೇವಾಲಯ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ, ತಾಯಿ ಹೆಸರಲ್ಲಿ ಒಂದು ಟ್ರಸ್ಟ್ ತೆರೆದು ಆ ಮೂಲಕ ಸಾವಿರಾರು ಜನರಿಗೆ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವ್ರು ಕೆಮ್ಮಾಳೆ ಗ್ರಾಮದಲ್ಲಿನ ತಮ್ಮ ಮೂರು ಎಕರೆ ಜಮೀನಿನಲ್ಲಿ ತಮ್ಮ ತಾಯಿ ಚೆನ್ನಾಜಮ್ಮ ಅವರ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿ, ದೇವಾಲಯವನ್ನೇ ಕಟ್ಟಿದ್ದಾರೆ. ತಾಯಿ ಹೆಸರಿನಲ್ಲಿ ಪಾರ್ವತಮ್ಮ ಚೆನ್ನಾಜಮ್ಮ ದತ್ತಿ ಪ್ರತಿಷ್ಠಾನ ತೆರೆದಿದ್ದಾರೆ. ಈವರೆಗೂ ಟ್ರಸ್ಟ್ ಮೂಲಕ 460 ನೇತ್ರದಾನ ಶಿಬಿರಗಳನ್ನು ಮಾಡಿದ್ದಾರೆ.
ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ 35 ಸಾವಿರ ಜನರ ಕಣ್ಣಿನ ಸರ್ಜರಿಗೆ ತಮ್ಮ ತಾಯಿಯ ಹೆಸರಿನಲ್ಲೇ ಸಹಾಯ ಮಾಡಿದ್ದಾರೆ. ನಮ್ಮ ತಾಯಿ ನಮಗೆ ಕಲಿಸಿದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ನೆನಪಿಸುವ ಸದುದ್ದೇಶದಿಂದ ದೇವಾಲಯ ನಿರ್ಮಿಸಿದ್ದೇವೆ ಎನ್ನುವ ಗೋಪಾಲ್ ಶ್ರವಣ ಕುಮಾರನ ಫೋಟೊವನ್ನೇ ಟ್ರಸ್ಟ್ ಲೋಗೋವನ್ನಾಗಿ ಮಾಡಿಕೊಂಡಿದ್ದಾರೆ.
ಈ ಸಮಾಜ ಸೇವೆ ಮುಂದುವರಿಯಲಿದ್ದು ತಮ್ಮ ಕುಟುಂಬ ವರ್ಗ ಇಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಇದು ತಾಯಿ ಕೊಟ್ಟ ಜನ್ಮ, ಅವರಿಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ ಎನ್ನುತ್ತಾ ಎಲ್ಲರೂ ತಂದೆ-ತಾಯಿಯರ ಸೇವೆ ಮಾಡಿ ಪುನೀತರಾಗಿ ಎನ್ನುತ್ತಾರೆ ಗೋಪಾಲ್.