ರಾಮನಗರ : ಅತಿಯಾದ ಹೊಟ್ಟೆ ನೋವು ಎಂದು ಹೇಳಿ ಆಸ್ಪತ್ರೆಗೆ ಸೇರಿದ್ದ ವಿಚಾರಣಾಧೀನ ಕೈದಿ ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಕುಪ್ಪಂ ಮೂಲದ ವಿಚಾರಣಾಧೀನ ಕೈದಿ ವೆಂಕಟೇಶ್ ಮೃತಪಟ್ಟಿದ್ದು, ಆನೆ ದಂತ ಕಳ್ಳತನ ಆರೋಪದ ಮೇಲೆ ಕನಕಪುರ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 11ರಂದು ಬಂಧಿಸಿದ್ದರು. ಈತನನ್ನು ವಿಚಾರಣಾಧೀನ ಕೈದಿಯಾಗಿ ರಾಮನಗರ ಜಿಲ್ಲಾ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಸೋಮವಾರ ರಾತ್ರಿ ತೀವ್ರ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿಸಲಾಗಿತ್ತು ಎನ್ನಲಾಗಿದ್ದು, ಹೊಟ್ಟೆನೋವು ತಾಳಲಾರದೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಆದರೆ ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈತನ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಇತ್ತೀಚಿನ ಪ್ರಕರಣ- ವಿಚಾರಣಾಧೀನ ಕೈದಿ ಪರಾರಿ : ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕೈದಿ ಕಾರಾಗೃಹದಿಂದ ಪರಾರಿಯಾಗಿದ್ದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಉಪಕಾರಾಗೃಹದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿತ್ತು. ವಿಚಾರಣಾಧೀನ ಕೈದಿ ಅನ್ವರಬಾಷಾ ಜೈಲಿನಿಂದ ಪರಾರಿಯಾಗಿದ್ದನು.
ವಿಜಯನಗರ ಜಿಲ್ಲೆಯ ರಾಮನಗರ ನಿವಾಸಿಯಾಗಿದ್ದ ಅನ್ವರಬಾಷಾ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕಳೆದ ಮೇ ತಿಂಗಳಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಶಾಳ ಹತ್ತಿರ ನಡೆದ ಕೊಲೆ ಪ್ರಕರಣ ಸಂಬಂಧ ಅನ್ವರಬಾಷಾನನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ, ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದ.
ಈ ಸಂಬಂಧ ಪ್ರತಿಕ್ರಿಯಿಸಿದ್ದ ದೇವದುರ್ಗ ಠಾಣೆ ಪೊಲೀಸರು, ವಿಚಾರಾಧೀನ ಕೈದಿಯೋರ್ವ ಪರಾರಿಯಾಗಿದ್ದಾನೆ. ಈ ಸಂಬಂಧ ಜೈಲರ್ ದೂರು ದಾಖಲಿಸಿದ್ದು, ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಚಾಮರಾಜನಗರದ ವಿಚಾರಣಾಧೀನ ಕೈದಿ ಪರಾರಿ : ಕಳೆದ ಆಗಸ್ಟ್ ತಿಂಗಳಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಪರಾರಿಯಾಗಿದ್ದ ಘಟನೆ ತಮಿಳುನಾಡಿನ ಆಸನೂರು ಎಂಬಲ್ಲಿ ನಡೆದಿತ್ತು. ಚಾಮರಾಜನಗರದ 25 ವರ್ಷದ ಯುವಕ ಪರಾರಿಯಾಗಿದ್ದ ಕೈದಿಯಾಗಿದ್ದಾನೆ.
ಈತನ ವಿರುದ್ಧ ಚಾಮರಾಜನಗರ ಗ್ರಾಮಾಂತರ ಠಾಣೆ, ಪೂರ್ವ ಠಾಣೆ ವ್ಯಾಪ್ತಿಯಲ್ಲಿ ದೇವಾಲಯ ಹುಂಡಿ ಕಳವು, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿ, ತಮಿಳುನಾಡಿನ ಈರೋಡ್ ಜಿಲ್ಲಾ ವ್ಯಾಪ್ತಿಯಲ್ಲೂ ಹಲವು ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ತಮಿಳುನಾಡು ಸತ್ಯಮಂಗಲಂನ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯುವಾಗ ಆರೋಪಿ ಆಸನೂರಿನ ಹೋಟೆಲ್ ಬಳಿ ಪರಾರಿಯಾಗಿದ್ದ.
ಇದನ್ನೂ ಓದಿ : ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ 1.8 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ..