ರಾಮನಗರ : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಟೊಯೊಟಾ ಕಾರ್ಖಾನೆ ಕಾರ್ಮಿಕರು ಹಾಗೂ ಕುಟುಂಬಸ್ಥರು ಮುಷ್ಕರ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಭೇಟಿ ನೀಡಿದುರು.
ಬಿಡದಿಗೆ ಆಗಮಿಸಿದ ಸಿದ್ದರಾಮಯ್ಯರನ್ನು ಸಾವಿರಾರು ಕಾರ್ಮಿಕರು ಬೈಕ್ ರ‍್ಯಾಲಿ ಮೂಲಕ ಅದ್ದೂರಿಯಾಗಿ ಬರ ಮಾಡಿಕೊಂಡರು. ಇದೇ ವೇಳೆ ದೂರವಾಣಿ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜತೆ ಮಾತನಾಡಿದ ಸಿದ್ದರಾಮಯ್ಯ, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅವರು, ನಾನು ಇವತ್ತು ಕಾರ್ಮಿಕರ ಸಮಸ್ಯೆ ಆಲಿಸಲು ಬಂದಿದ್ದೇನೆ. ಸದನದಲ್ಲಿ ಈ ಬಗ್ಗೆ ಚರ್ಚೆ ಕೂಡ ಮಾಡುತ್ತೇನೆ. ಕಾರ್ಖಾನೆ ಲಾಕ್‌ಔಟ್ ಆದಾಗ ಕಾರ್ಮಿಕರ ಪರ ಸರ್ಕಾರ ನಿಲ್ಲಬೇಕಿತ್ತು. ಸರ್ಕಾರದ ಬೇಜವಾಬ್ದಾರಿತನದಿಂದ ಕಾರ್ಮಿಕರು ಇಷ್ಟು ದಿನ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಯಾಕಿದೆ ಅಂತಾ ಗೊತ್ತಾಗುತ್ತಿಲ್ಲ. ಸಿಎಂ ಹಾಗೂ ಸಚಿವರು ಯಾಕಿದ್ದಾರೆ? ಆಡಳಿತ ಮಂಡಳಿಯವರನ್ನು ಒಂದಲ್ಲ, ಎರಡು ಬಾರಿ ಕರೆದು ಮಾತನಾಡಬೇಕು. ಕಾನೂನಿದೆ ಅಲ್ಲಿ ಹೋಗಿ ಅಂತಾ ಸಚಿವರು ಹೇಳೋದು ಸರಿಯಲ್ಲ ಎಂದರು.
ಜಪಾನಿನ ಟೊಯೊಟಾ ಕಂಪನಿಗೆ ರಾಜ್ಯದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಭೂಮಿ, ನೀರು, ವಿದ್ಯುತ್ ನೀಡಿರುವುದು ಇಲ್ಲಿನ ಸರ್ಕಾರ. ನಮ್ಮ ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ತನ್ನ ಕಾರ್ಮಿಕರ ಮೇಲೆ ಜಪಾನಿನ ಕಾನೂನುಗಳನ್ನು ಅನ್ವಯಿಸೋಕೆ ಹೊರಟರೆ ಅದು ತಪ್ಪಾಗುತ್ತದೆ.
ವಿದೇಶದ ಯಾವುದೇ ಕಂಪನಿಗಳು ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು, ಉತ್ಪಾದನಾ ಘಟಕಗಳನ್ನು ಆರಂಭಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಅವುಗಳು ಈ ನೆಲದ ಕಾನೂನಿಗೆ ಅನ್ವಯವಾಗಿ ಕಾರ್ಮಿಕರನ್ನು ನಡೆಸಿಕೊಳ್ಳಬೇಕು. ಕಾರ್ಮಿಕರು ಪ್ರತಿಭಟನೆ ಆರಂಭಿಸಿ ಸುಮಾರು ಮೂರು ತಿಂಗಳಾಯ್ತು. ಇಷ್ಟರೊಳಗೆ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸಬೇಕಿತ್ತು.
ಕಾರ್ಮಿಕ ಸಚಿವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಅಂದ್ರೆ ಮುಖ್ಯಮಂತ್ರಿಗಳೇ ಸಭೆ ಕರೆದು ಇತ್ಯರ್ಥಪಡಿಸಬೇಕಿತ್ತು ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಎಂಎಲ್ಸಿಗಳಾದ ರವಿ, ಸಿ ಎಂ ಲಿಂಗಪ್ಪ, ಮಾಜಿ ಶಾಸಕ ಬಾಲಕೃಷ್ಣ ಸೇರಿ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.