ರಾಮನಗರ: ನಗರದಲ್ಲಿ ಎರಡನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತ ರೋಗಿ-3,313 ವಾಸವಿದ್ದ ಏರಿಯಾ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ರಾಮನಗರ ಟೌನ್ನ ಎಂಜಿ ರಸ್ತೆಯನ್ನು ಸೀಲ್ಡೌನ್ ಮಾಡಿರುವ ಅಧಿಕಾರಿಗಳು, ಆತನ ನಿಕಟ ಸಂಪರ್ಕ ಹೊಂದಿದ್ದ ಕುಟುಂಬದ ಮೂವರನ್ನು ಸೇರಿ ಒಟ್ಟು 14 ಮಂದಿಯನ್ನು ಈಗಾಗಲೇ ಕರೆದೊಯ್ದಿದ್ದು, ಕ್ವಾರಂಟೈನ್ ಮಾಡಿದ್ದಾರೆ. ಅಲ್ಲದೆ ಆತ ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಟ್ರಾವೆಲ್ ಹಿಸ್ಟರಿಯಲ್ಲಿ, ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರಿಗೆ ಓಡಾಡಿದ್ದ ಪ್ರದೇಶಗಳು, ಸಂಪರ್ಕ ಮಾಡಿದ್ದ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಮೊದಲ ಹಂತದ ಸಂಪರ್ಕ ಹೊಂದಿದ್ದ 14 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತನ ದ್ವೀತಿಯ ಸಂಪರ್ಕದ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ ಆತ ವಾಸವಿದ್ದ ಕುಂಬಾರ ಬೀದಿ ಸೀಲ್ಡೌನ್ ಮಾಡಿದ್ದು, ಅವಶ್ಯಕತೆಯಿದ್ದಲ್ಲಿ ಸೋಂಕಿತ ಓಡಾಟ ನಡೆಸಿದ್ದ ಏರಿಯಾಗಳ ಸೀಲ್ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ.
ಅಲ್ಲದೆ ಸೀಲ್ಡೌನ್ ಪ್ರದೇಶದಲ್ಲಿ ನಗರ ಸಭೆ ಸಿಬ್ಬಂದಿಗೆ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಜೊತೆಗೆ ಸೋಂಕಿತ ವ್ಯಕ್ತಿ ಓಡಾಡಿದ್ದ ಪ್ರದೇಶದಲ್ಲಿನ ಅಂಗಡಿಗಳನ್ನ ಬಂದ್ ಮಾಡಿದ್ದಾರೆ. ಯಾರೂ ಹೊರಗಡೆ ಓಡಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ. ಜೊತೆಗೆ ಕುಂಬಾರ ಬೀದಿ, ಬಳೇ ಪೇಟೆ ಹಾಗೂ ಎಂಜಿ ರಸ್ತೆಯ ಬಹುಪಾಲು ನಿವಾಸಿಗಳ ಆರೋಗ್ಯ ತಪಾಸಣೆಯನ್ನು ಮತ್ತೊಮ್ಮೆ ಸಂಪೂರ್ಣವಾಗಿ ನಡೆಸಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.