ರಾಮನಗರ: ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಊರ ಹೊರಗಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನಹೊಸಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ದೇಸೀಗೌಡ (35) ಎಂಬಾತ ಪತ್ನಿ ಇಂದಿರಮ್ಮ (31) ಎಂಬಾಕೆಯನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ 18 ವರ್ಷಗಳ ಹಿಂದೆ ವಿವಾಹವಾಗಿದ್ದ ದೇಸಿಗೌಡ ಮತ್ತು ಇಂದಿರಮ್ಮ ತಮ್ಮ 16 ವರ್ಷದ ಮಗನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಕಳೆದೆರಡು ವರ್ಷಗಳ ಹಿಂದೆ ಕೊರೊನಾ ಹಾವಳಿಯಿಂದಾಗಿ ದಂಪತಿ ಬೆಂಗಳೂರಿನಿಂದ ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ವಾಪಸ್ ಬಂದಿದ್ದರು. ಇತ್ತೀಚೆಗೆ ಕೊರೊನಾ ಮುಗಿದ ಮೇಲೆ ನಗರ ವಾಸಕ್ಕೆ ಗೀಳು ಬಿದ್ದಿದ್ದ ಪತ್ನಿ ಇಂದಿರಾ ಪದೇ ಪದೇ ಗಂಡನನ್ನು ಮತ್ತೆ ಬೆಂಗಳೂರಿಗೆ ವಾಪಸ್ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದರಂತೆ.
ದಂಪತಿ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿ ಇತ್ತೀಚೆಗೆ ಗಂಡನನ್ನು ಮೂಲೆಗುಂಪು ಮಾಡಿ ತಾನೇ ಸ್ವತಃ ಅಂಗಡಿಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮತ್ತೆ ಬೆಂಗಳೂರಿನ ಹೋಗಬೇಕೆಂದು ಕ್ಯಾತೆ ತೆಗೆದಿದ್ದ ಪತ್ನಿ ಪತಿಯೊಂದಿಗೆ ಜಗಳ ಮಾಡಿಕೊಂಡಿದ್ದರಂತೆ. ಈ ವೇಳೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿದ್ದಾರೆ.
ಇದರ ಮಧ್ಯೆ ಹೆಂಡತಿಯ ಒತ್ತಾಯದಿಂದ ಬೇಸತ್ತಿದ್ದ ದೇಸೀಗೌಡ ಇಬ್ಬರೂ ಜೀವಂತವಾಗಿರಬಾರದು ಎಂಬ ನಿರ್ಧಾರಕ್ಕೆ ಬಂದು ತನ್ನ ಪತ್ನಿಯನ್ನು ಚೂರಿಯಿಂದ ಕತ್ತು ಕೊಯ್ದು ಕೊಲೆ ಮಾಡಿ, ತಾನೂ ಊರ ಹೊರಗಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕೋಡಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ರೈತರ ಸಾವು