ರಾಮನಗರ: ರಾತ್ರಿಯಿಂದ ರಾಮನಗರ, ಚನ್ನಪಟ್ಟಣ, ಕನಕಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಇಂದು ಬೆಳಗಿನ ಜಾವ ಕೂಡ ಮಳೆ ಮುಂದುವರೆದಿದೆ. ಭಾರಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿ ಕೆರೆಯಂತಾಗಿದ್ದು, ಹಲವೆಡೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಧಾರಾಕಾರ ಮಳೆಯಿಂದ ಈಗಾಗಲೇ ಹೆದ್ದಾರಿ ಬದಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗೌರಿ, ಗಣೇಶ ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುತ್ತಿರುವ ಜನರಿಗೆ ತೀವ್ರ ತೊಂದರೆಯಾಗಿದೆ.
ಶಾಲೆಗಳಿಗೆ ರಜೆ ಘೋಷಣೆ: ಎಡ ಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಮನಗರ, ಚನ್ನಪಟ್ಟಣ, ಕನಕಪುರದ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಗಂಗಣ್ಣಸ್ವಾಮಿ ಆದೇಶ ಹೊರಡಿಸಿದ್ದಾರೆ. ಹಾಗೆಯೇ, ಜಿಲ್ಲೆಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕೂಡ ರಜೆ ಘೋಷಣೆ ಮಾಡಿದೆ.
ಪ್ರಯಾಣಿಕರ ರಕ್ಷಣೆ: ತಾಲೂಕಿನ ಬಿಳಗುಂಬ ಅಂಡರ್ ಪಾಸ್ನಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿದ್ದು, ಸ್ಥಳೀಯರು ನೆರವಿಗೆ ಧಾವಿಸಿ ರಕ್ಷಣೆ ಮಾಡಿದರು. ಇನ್ನು ರಾಮನಗರ ನಾಲ್ಕನೇ ವಾರ್ಡ್ನಲ್ಲಿ 20 ಅಡಿ ಎತ್ತರದ ಬೃಹತ್ ತಡೆ ಗೋಡೆ ಕುಸಿತದ ಪರಿಣಾಮ 50 ಕ್ಕೂ ಕುರಿಗಳು ಜೀವಂತ ಸಮಾಧಿಯಾಗಿದೆ. ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಕ್ಕೆ ಸೇರಿದ ಸರ್ಕಾರಿ ಶಾಲೆಗಳಿಗೆ ಮಳೆ ನೀರು ನುಗ್ಗಿದೆ. ನಾಲ್ಕೈದು ಅಡಿ ಎತ್ತರದವರೆಗೂ ಶಾಲೆಯ ಆವರಣದಲ್ಲೇ ನೀರು ತುಂಬಿಕೊಂಡಿರುವ ದೃಶ್ಯಗಳನ್ನು ಕಾಣಬಹುದು.
ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಭೂಮಿ.. ವ್ಯಕ್ತಿ ಸಾವು, ನಾಲ್ವರು ನಾಪತ್ತೆ
ಅವೈಜ್ಞಾನಿಕ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ: ರಾಮನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಕೆರೆಯಂತಾಗಿದೆ. ಸಂಗನಬಸವನದೊಡ್ಡಿ ಬಳಿಯ ಹೆದ್ದಾರಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ನೀರಿನಲ್ಲಿ ಕಾರು ಮತ್ತು ಇತರ ವಾಹನಗಳು ಮುಳುಗಿವೆ.
ನೂತನ ಎನ್ಹೆಚ್ 275 ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ದುಃಸ್ಥಿತಿಯಾಗಿದ್ದು, ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಿಲುಕಿಕೊಂಡಿವೆ. ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ, ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತಿದ್ದು, ಡಿಬಿಎಲ್ ಕಂಪನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ಪ್ರಸ್ತಾಪ ಮಾಡಿದ್ದು, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ಬಂದಾಗ ಮನೆ ಹಾಗೂ ಜಮೀನುಗಳಿಗೆ ನೀರು ಬರುತ್ತಿದೆ. ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋದ ಯುವಕ
ಸ್ಥಳ ಪರಿಶೀಲನೆ ನಡೆಸಲಿರುವ ಮಾಜಿ ಸಿಎಂ ಹೆಚ್ಡಿಕೆ: ಮಳೆಹಾನಿ ಪ್ರದೇಶಕ್ಕೆ ಹೆಚ್‌ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗಿದ್ದು, ಪರಿಹಾರ ಕಾರ್ಯ ಚುರುಕಿನಿಂದ ಸಾಗಿದೆ. ಎಲ್ಲೆಲ್ಲಿ ಮನೆ ಕಳೆದುಕೊಂಡಿದ್ದಾರೆ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಧಾರಾಕಾರ ಮಳೆ.. ರಾಜ್ಯಸಭೆ ಸದಸ್ಯ ಜಗ್ಗೇಶ್ ಮನೆ ಜಲಾವೃತ