ರಾಮನಗರ : ದೆಹಲಿ, ಉತ್ತರಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆ ಇಲ್ಲಿ ನಡೆಯುತ್ತಿರುವುದು ನಾವೆಲ್ಲರೂ ತಲೆತಗ್ಗಿಸಬೇಕಾದ ವಿಚಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ರಾಮನಗರದಲ್ಲಿ ಮಾತನಾಡಿದ ಅವರು, ನಿನ್ನೆಯಿಂದಲೂ ಕಾಂಗ್ರೆಸ್-ಬಿಜೆಪಿ ನಾಯಕರ ನಡುವಿನ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. ಮೈಸೂರಿನಲ್ಲಿ ಇಂತಹದ್ದೊಂದು ಅಮಾನವೀಯ ಕೃತ್ಯ ನಡೆಯಬಾರದಿತ್ತು. ಪೊಲೀಸ್ ವೈಫಲ್ಯದಿಂದಲೇ ಈ ಕೃತ್ಯ ನಡೆದಿದೆ ಎಂದಿದ್ದಾರೆ.
ಹಳ್ಳಿ, ಹಳ್ಳಿಗಳಲ್ಲಿ ಮಟ್ಕಾ ದಂಧೆಗಳು ನಡೆಯುತ್ತಿವೆ. ಸರ್ಕಾರ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಉತ್ತರಪ್ರದೇಶ, ದೆಹಲಿಯಲ್ಲಿ ನಡೆದಂತಹ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿವೆ.
ಇಂತಹ ಘಟನೆಗಳಿಗೆ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ನು, ಗೃಹ ಇಲಾಖೆ ಒಂದು ಸೂಕ್ಷ್ಮವಾದ ಇಲಾಖೆಯಾಗಿದೆ. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡಬೇಕೆಂದರು.
ಓದಿ: ಮೈಸೂರು ಬಳಿಕ ಬೆಳಗಾವಿಯಲ್ಲೂ ಹೇಯ ಕೃತ್ಯ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್..!