ರಾಮನಗರ: ರೇಷ್ಮೆನಗರಿ ಜಿಲ್ಲೆಯ ಜನತೆ ಕಾಡಾನೆ ದಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಪದೇ ಪದೇ ಆನೆಗಳ ದಾಳಿಯಿಂದ ನಲುಗುತ್ತಿರುವ ಜನತೆ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಶಾನುಬೋಗನಹಳ್ಳಿ ಗ್ರಾಮದಲ್ಲಿ ಪದೇ ಪದೇ ಕಾಡಾನೆಗಳು ದಾಳಿ ಮಾಡುತ್ತಿವೆ. ಕಳೆದ ರಾತ್ರಿ ಗ್ರಾಮದ ಬಸವರಾಜು, ಶಿವಲಿಂಗ ನಾಗರಾಜು, ಪುಟ್ಟಸ್ವಾಮಿ ಚನ್ನೇಗೌಡ, ಪಾಪಣ್ಣ ಸೇರಿದಂತೆ ಹಲವು ರೈತರಿಗೆ ಸೇರಿದ ಜಮೀನಿನ ಮೇಲೆ ಆನೆಗಳು ದಾಳಿ ನಡೆಸಿದ್ದು, ಕಟಾವಿಗೆ ಬಂದ ಬೆಳೆ ನಾಶ ಮಾಡಿವೆ.
ಇದಲ್ಲದೆ ಆನೆಗಳ ಹಿಂಡನ್ನು ಕಾಡಿಗೆ ಕಳುಹಿಸುವ ವೇಳೆ ದಾಳಿಗೆ ನೂರಾರು ಬಾಳೆಗಿಡ, ಮಾವಿನ ಮರ ನಾಶವಾಗಿವೆ. ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಹಿಂಡು ಕಬ್ಬಾಳು ವಲಯದಲ್ಲಿ ಬೀಡು ಬಿಟ್ಟಿದ್ದು, ಪ್ರತಿ ವರ್ಷ ಆನೆ ದಾಳಿ ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅರಣ್ಯಾಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.