ರಾಮನಗರ: ಕೊರೊನಾ ಸಂಕಷ್ಟದಲ್ಲಿಯೂ ಸರ್ಕಾರ ವೇತನ ನೀಡದೆ ಬಿಸಿಯೂಟ ತಯಾರಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ ಬಿಸಿಯೂಟ ತಯಾರಕರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಳೆದ ಐದು ತಿಂಗಳ ವೇತನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 1,18,000 ಮಂದಿ ಕನಿಷ್ಠ ಗೌರವಧನ ಪಡೆದು ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಕಾಯಕ ಮಾಡುತ್ತಿದ್ದೇವೆ. ಕೊರೊನಾ ಸೋಂಕಿನ ಭೀತಿಯಲ್ಲಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ ನಂತರ ಬಿಸಿಯೂಟ ತಯಾರಕರು ಜೀವನ ನಡೆಸುವುದೇ ದುಸ್ತರವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋವಿಡ್-19 ಸಂಕಷ್ಟ ಕಾಲದಲ್ಲಿ ಎಲ್ಲಾ ವರ್ಗದ ಕೆಲಸಗಾರ ನೆರವಿಗೆ ಧಾವಿಸಿ ಪರಿಹಾರ ನೀಡಿದೆ. ಅದರೆ ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಬಿಸಿಯೂಟ ತಯಾರಕರ ನೆರವಿಗೆ ಧಾವಿಸಿಲ್ಲ. ಪರಿಹಾರದ ಮಾತಿರಲಿ ಕಳೆದ ಐದು ತಿಂಗಳ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಗಂಬೀರ ಆರೋಪ ಮಾಡಿದರು.
ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಬಿಸಿಯೂಟ ತಯಾರಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.