ರಾಮನಗರ: ಶಾಲಾ ವಾಹನದಿಂದ ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ ಪಿಚ್ಚನಕೆರೆ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಸಿದ್ದೇನಹಳ್ಳಿ ಗ್ರಾಮದ ಸ್ವಾಮಿ ಎಂಬುವರ ಪುತ್ರಿ ರಕ್ಷಿತಾ (5) ಮೃತ ಬಾಲಕಿ. ಬಿಡದಿಯ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆ ಮುಗಿಸಿ ವಾಪಸ್ ಮನೆಗೆ ಕರೆತರುವಾಗ ಘಟನೆ ಸಂಭವಿಸಿದೆ. ಸ್ಕೂಲ್ ಬಸ್ ಡೋರ್ ಹಾಕದ ಪರಿಣಾಮ ರಕ್ಷಿತಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಶಾಲಾ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆಂಬ ಆರೋಪ ಕೇಳಿ ಬಂದಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಾಯ್ತು?: ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ರಕ್ಷಿತಾ, ಎಂದಿನಂತೆ ಶಾಲೆ ಮುಗಿಸಿ ಬಸ್‌ನಲ್ಲಿ ಬರಬೇಕಾದ ವೇಳೆ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಹೋಗುತ್ತಿದ್ದಾಗ ಬಸ್‌ನ ಬಾಗಿಲು ಹಾಕಿರಲಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ಕೆಳಗಿ ಬಿದ್ದಿದ್ದಾಳೆ. ಈ ವೇಳೆ ತಲೆಗೆ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಮನಗರದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಅಪಘಾತ
ಆಕ್ರೋಶ ಹೊರಹಾಕಿದ ಜನ: ಬಸ್‌ನಿಂದ ವಿದ್ಯಾರ್ಥಿನಿ ಬಿದ್ದು ಮೃತಪಟ್ಟ ಸುದ್ದಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದಂತಹ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಸಿಬ್ಬಂದಿ ವಿರುದ್ಧ ಹಿಡಿಶಾಪ ಹಾಕಿದರು. ತಮ್ಮ ಬೇಜವಾಬ್ದಾರಿತನದಿಂದ ಒಂದು ಮುಗ್ದ ಜೀವವನ್ನು ಬಲಿ ತೆಗೆದುಕೊಂಡಿದೆ, ಅವರ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಆಕ್ರೊಶ ಹೊರಹಾಕಿದರು. ಈ ಕುರಿತು ಶಾಲೆ ಹಾಗೂ ಸಿಬ್ಬಂದಿ ವಿರುದ್ಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕಳೆದ ವರ್ಷದ ಆಗಸ್ಟ್ 4ರಂದು ಸಹ ಇಂತಹದ್ದೇ ಘಟನೆ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲೆಯ ಬಸ್ಸೊಂದು ರಸ್ತೆ ಬದಿ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಮಾಗಡಿ ತಾಲೂಕಿನ ಕುದೂರು ಹೋಬಳಿಯ ಹುಲಿಕಲ್ ಗ್ರಾಮದ ಮಾನಸ ಗಂಗೋತ್ರಿ ವಿದ್ಯಾಸಂಸ್ಥೆಗೆ ಸೇರಿದ ಬಸ್ ಇದಾಗಿತ್ತು. ಅಪಘಾತದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಇದನ್ನೂ ಓದಿ: ವಿಡಿಯೋ: ಚಲಿಸುತ್ತಿದ್ದ ಶಾಲಾ ಬಸ್‌ನಿಂದ ಕೆಳಬಿದ್ದ ಎಲ್‌ಕೆಜಿ ವಿದ್ಯಾರ್ಥಿ