ರಾಯಚೂರು : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ವಿದ್ಯಾರ್ಥಿಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಗದ ಹಿನ್ನೆಲೆ ಸುತ್ತುವರೆದು ಪರೀಕ್ಷಾ ಕೇಂದ್ರ ತಲುಪಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಇಂದು ದೇವರಗುಡಿ ಗ್ರಾಮದ 10 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಹಳ್ಳದ ಮಾರ್ಗವಾಗಿ ಪಗಡದಿನ್ನಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರೆ ಹತ್ತಿರವಾಗುತ್ತದೆ. ರಸ್ತೆ ಮಾರ್ಗವಾದ್ರೆ ಸುಮಾರು 25 ಕಿ.ಮೀ ಸುತ್ತುವರೆಯಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಬಾಲಕರು ಹಳ್ಳದಾಟಲು ಯತ್ನಿಸಿದ್ದಾರೆ. ಆದ್ರೆ, ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಲಾಗಲಿಲ್ಲ. ನಂತರ ವಿಧಿ ಇಲ್ಲದೆ ಸುತ್ತುವರೆದು ಪರೀಕ್ಷಾ ಕೇಂದ್ರ ತಲುಪಿದರು.
ರೈತರು ಸಹ ಈ ಹಳ್ಳವನ್ನು ದಾಟಿ ಜಮೀನುಗಳಿಗೆ ಹೋಗಲು ನಿತ್ಯ ಹರಸಾಹಸ ಪಡಬೇಕಾದ ಪ್ರಸಂಗ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.