ರಾಯಚೂರು : ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿದ್ದ 20 ಜನರನ್ನು ಮರಳಿ ಕರೆ ತಂದಿರುವ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.
ಲಾಕ್ಡೌನ್ ಸಡಿಲಿಕೆ ನಿಯಮದ ಪ್ರಕಾರ ಕ್ವಾರಂಟೈನ್ ಅವಧಿಯನ್ನು 7 ದಿನಗಳಿಗೆ ಇಳಿಸಲಾಗಿತ್ತು. ಹೀಗಾಗಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಕ್ವಾರಂಟೈನ್ ಕೇಂದ್ರದಲ್ಲಿನ 20 ಜನರನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿತ್ತು.
ಆದರೆ, ಜಾಲಹಳ್ಳಿ ಕೇಂದ್ರದಲ್ಲಿದ್ದ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಶಂಕೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ 20 ಜನರನ್ನ ಮತ್ತೆ ತನ್ನ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಮೊದಲು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿ ಈಗ ಮರಳಿ ಕ್ವಾರಂಟೈನ್ ಮಾಡಿರುವುದು ದೇವದುರ್ಗ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ.