ರಾಯಚೂರು: ಪ್ರತಿನಿತ್ಯ ಪಟ್ಟಣ, ನಗರ, ಮಹಾನಗರಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಎದುರಾಗಬಾರದೆಂದು ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಯಿಂದ ಮನೆ ಮನೆಗೆ ತೆರಳಿ ಕಸವನ್ನು ಸಂಗ್ರಹಿಸುವ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇದೇ ವ್ಯವಸ್ಥೆಯನ್ನ ಜಾರಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಂದ ಮನೆ ಮನೆಗೆ ತೆರಳಿ ಕಸವನ್ನ ಸಂಗ್ರಹಿಸಿ, ವಿಲೇವಾರಿ ಮಾಡಬೇಕು ಎನ್ನುವ ಆದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ 179 ಗ್ರಾಮ ಪಂಚಾಯಿತಿಗಳಿಂದ ಆಯಾ ಗ್ರಾಮಗಳಲ್ಲಿ ಕಸ ಸಂಗ್ರಹಿಸಲು ಮುಂದಾಗಿದ್ದು, ಕಸ ಸಂಗ್ರಹಿಸುವ ವಾಹನಗಳನ್ನ ಖರೀದಿಸಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 179 ಗ್ರಾಮ ಪಂಚಾಯಿತಿಗಳಿವೆ. ಪ್ರಾರಂಭಿಕವಾಗಿ 87 ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಯೋಜನೆ ರೂಪಿಸಿಕೊಂಡಿದ್ದು, ಕಸ ಸಂಗ್ರಹಿಸುವ 100 ವಾಹನಗಳನ್ನ ಖರೀದಿಸಲಾಗಿದೆ.
ಎರಡು ವಿಭಾಗವನ್ನಾಗಿ ಮಾಡಿದ್ದು, ಎರಡು ಮಾದರಿಯಲ್ಲಿ ಕಸವನ್ನು ವಿಂಗಡಿಸಿ ಸಂಗ್ರಹಿಸುವ ಯೋಜನೆ ರೂಪಿಸಿದೆ. ಸಂಗ್ರಹಿಸಿದ ಘನ ತ್ಯಾಜ್ಯವನ್ನ ವಿಲೇವಾರಿ ಮಾಡಲು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 1 ಎಕರೆ ಇಲ್ಲವೇ 2 ಎಕರೆ ಪ್ರದೇಶವಿರುವ ಸರ್ಕಾರಿ ಜಾಮೀನು ಗುರುತಿಸಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗುತ್ತೆ. ಅಲ್ಲಿಂದ ಕಸವನ್ನು ವಿಲೇವಾರಿ ಮಾಡಲಾಗುತ್ತದೆ.
ಈ ಯೋಜನೆಗಾಗಿ ಪ್ರತಿ ಗ್ರಾಮ ಪಂಚಾಯತ್ಗೆ 20 ಲಕ್ಷ ರೂಪಾಯಿ ಅನುದಾನವಿದೆ. ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಮೂಲಕ 100 ವಾಹನಗಳನ್ನ ಖರೀದಿ ಮಾಡಲಾಗಿದೆ. ಆದರೆ 87 ಗ್ರಾಮ ಪಂಚಾಯಿತಿಗಳಲ್ಲಿ ವಾಹನಗಳ ಕಸ ಸಂಗ್ರಹಣೆ ಕಾರ್ಯಕ್ಕೆ ಅನುಮೋದನೆ ಸಿಕ್ಕಿದ್ದು, ಇನ್ನುಳಿದ 27 ವಾಹನಗಳಿಗೆ ಮುಂಗಡವಾಗಿ ಅನುಮೋದನೆ ದೊರೆಯುವ ಕಾರಣಕ್ಕೆ ಖರೀದಿಸಲಾಗಿದೆ.