ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮಟ್ಟದ ಆಹಾರ ಪಾಕೆಟ್ ಪೂರೈಕೆ ಮಾಡಲಾಗುತ್ತಿದೆ ಎಂದು ತಾಯಂದಿರು ಆರೋಪಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತದೆ. ಆದರೆ, ಸ್ಥಳೀಯ ಎಸ್. ಎಂ. ಪಿ. ಸಿ ಸಂಸ್ಥೆಯ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕ ಘಟಕ ಸಿದ್ಧಪಡಿಸಿರುವ ಕಿಟ್‌ಗಳಲ್ಲಿ ತಯಾರಾದ ದಿನಾಂಕ, ಮುಗಿವ ಅವಧಿ ಪ್ರಕಟಿಸಿಲ್ಲ. ಪಾಕೆಟ್ ತೆರೆದರೆ ಸಾಕು, ಆಹಾರ ಪದಾರ್ಥಗಳು ದುರ್ನಾಥ ಬೀರುತ್ತಿವೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಯಂದಿರು ಆರೋಪಿಸಿದರು.
ಅಂಗನವಾಡಿ ಕೇಂದ್ರದಿಂದ ಸ್ವಾಮಿ ವಿವೇಕಾನಂದ ನಗರದ ಚಿಕ್ಕ ಮಕ್ಕಳಿರುವ ಬಹುತೇಕ ಮನೆಗಳಿಗೆ ಪೌಷ್ಠಿಕ ಆಹಾರದ ಪಾಕೆಟ್ ವಿತರಿಸಲಾಗಿದ್ದು, ಅವು ಅತ್ಯಂತ ಕಳಪೆ ಮಟ್ಟದ್ದಾಗಿವೆ. ಸಂಬಂಧಿಸಿದ ಅಧಿಕಾರಿಗಳು ತಯಾರಿಕಾ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಹೋರಾಟ ನಡೆಸುವುದಾಗಿ ಸಮಾಜ ಸೇವಕ ಪ್ರಭು ಗಸ್ತಿ ಎಚ್ಚರಿಕೆ ನೀಡಿದ್ದಾರೆ..